ಮುಸ್ಲಿಂ ಮಹಿಳೆಯರು ಐಡಿ ಕಾರ್ಡ್ ಪರಿಶೀಲಿಸಿ ಮುಖ ತೋರಿಸಲು ಸೂಚಿಸಿದ ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾದವಿ ಲತಾ | ಚುನಾವಣಾ ಆಯೋಗಕ್ಕೆ ಓವೈಸಿ ದೂರು

PHOTO | ANI screengrab
ಹೈದರಾಬಾದ್: ಬಿಜೆಪಿಯ ಹೈದರಾಬಾದ್ ಲೋಕಸಭಾ ಅಭ್ಯರ್ಥಿ ಕೆ ಮಾಧವಿ ಲತಾ ಅವರು ಮತಗಟ್ಟೆಯೊಂದರಲ್ಲಿ ಬುರ್ಖಾಧಾರಿ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿ ಅವರಿಗೆ ಅವರ ಶಿರವಸ್ತ್ರ ತೆಗೆದು ಮುಖ ತೋರಿಸುವಂತೆ ಹೇಳುತ್ತಿರುವ ವೀಡಿಯೋವೊಂದು ವೈರಲ್ ಆದ ಬೆನ್ನಿಗೆ ಎಐಎಂಐಎಂ ಅಧ್ಯಕ್ಷ ಹಾಗೂ ಪಕ್ಷದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಅಮೃತ ವಿದ್ಯಾಲಯದಲ್ಲಿ ತಮ್ಮ ಮತದಾನಗೈದ ನಂತರ ಮಾಧವಿ ಲತಾ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಆಝಂಪುರ್ ಎಂಬಲ್ಲಿನ ಮತಗಟ್ಟೆಯಲ್ಲಿ ಆಕೆ ಮತದಾನಕ್ಕೆ ಕಾದಿದ್ದ ಮಹಿಳೆಯರ ಐಡಿ ಕಾರ್ಡ್ ಪರಿಶೀಲಿಸಿ ಬುರ್ಖಾಧಾರಿ ಮಹಿಳೆಯರಿಗೆ ಮುಖ ತೋರಿಸುವಂತೆ ಹೇಳುವುದು ಹಾಗೂ ಅವರು ಅಂತೆಯೇ ಮಾಡುವುದು ವೀಡಿಯೋದಲ್ಲಿ ಕಾಣಿಸುತ್ತದೆ.
ಐಡಿ ಕಾರ್ಡ್ಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವೇ ಮತದಾನಕ್ಕೆ ಅನುಮತಿಸಬೇಕೆಂದೂ ಅವರು ಚುನಾವಣಾಧಿಕಾರಿಗಳಿಗೆ ಸೂಚಿಸುವುದು ಕಾಣಿಸುತ್ತದೆ. ಮತದಾರರ ಪಟ್ಟಿಯಲ್ಲಿ ಹಲವು ನ್ಯೂನತೆಗಳಿಗೆ ಹಲವು ಮತದಾರರ ಹೆಸರುಗಳು ಕಾಣೆಯಾಗಿವೆ ಎಂದೂ ಆಕೆ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ರಾಮ ನವಮಿ ರ್ಯಾಲಿ ಸಂದರ್ಭ ಮಸೀದಿಯತ್ತ ಬಿಲ್ಲು ಬಾಣ ಪ್ರಯೋಗಿಸುವ ಸನ್ನೆ ಮಾಡಿ ವಿವಾದಕ್ಕೀಡಾಗಿದ್ದರು.







