ಇಂದಿರಾಗಾಂಧಿ ನಮ್ಮನ್ನು ಜೈಲಿನಲ್ಲಿರಿಸಿದ್ದರು, ಆದರೆ ಕಿರುಕುಳ ನೀಡಲಿಲ್ಲ : ಲಾಲು ಪ್ರಸಾದ್ ಯಾದವ್

ಲಾಲು ಪ್ರಸಾದ್ ಯಾದವ್ | PC : PTI
ಪಾಟ್ನಾ :ತುರ್ತುಪರಿಸ್ಥಿತಿ ಸಂದರ್ಭದ ಕರಾಳದಿನಗಳನ್ನು ಶನಿವಾರ ನೆನಪಿಸಿಕೊಂಡ ಆರ್ ಜೆ ಡಿ ವರಿಷ್ಠ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಅವರು, ಆಗಿನ ಪ್ರಧಾನಿ ಇಂದಿರಾಗಾಂದಿ ತನ್ನನ್ನು ಸೇರಿದಂತೆ ಹಲವು ನಾಯಕರನ್ನು ಜೈಲಿಗೆ ಹಾಕಿದ್ದರು. ಆದರೆ ಅವರಿಗೆ ಕಿರುಕುಳ ನೀಡಿರಲಿಲ್ಲವೆಂದು ಅವರು ಹೇಳಿದ್ದಾರೆ.
ತಾನು ಹಾಗೂ ಪತ್ರಕರ್ತ ನಳಿನ್ ವರ್ಮಾ ಜಂಟಿಯಾಗಿ ಬರೆದಿರುವ ‘ದಿ ಸಂಘ ಸೈಲೆನ್ಸ್ ಇನ್ 1975 ’ ಲೇಖನದಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಲಾಲುಪ್ರಸಾದ್ ಅವರು ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಹಾಲಿ ಎನ್ಡಿಎ ಸರಕಾವನ್ನು ಕಟುವಾಗಿ ಟೀಕಿಸಿರುವ ಅವರು, ದೇಶದ ಪ್ರಜಾಪ್ರಭುತ್ವದ ಮೇಲೆ 1975ನೇ ಇಸವಿ ಒಂದು ಕಪ್ಪುಚುಕ್ಕೆಯಾದರೂ, 2024ರಲ್ಲಿ ಪ್ರತಿಪಕ್ಷವನ್ನು ಗೌರವಿಸದೆ ಇದ್ದವರನ್ನು ಕೂಡಾ ಮರೆಯದಿರೋಣ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ನಡೆದಂತಹ ಅತಿರೇಕಗಳ ವಿರುದ್ಧದ ಚಳವಳಿಯನ್ನು ಮುನ್ನಡೆಸಲು ಜಯಪ್ರಕಾಶ್ ನಾರಾಯಣ್ ಅವರು ರಚಿಸಿದ ಚಾಲನಾ ಸಮಿತಿಗೆ ನಾನು ಸಂಚಾಲಕನಾಗಿದ್ದೆ. ತುರ್ತು ಪರಿಸ್ಥಿತಿ ವೇಳೆ ನಾನು ಭದ್ರತಾಪಾಲನೆ ಕಾಯ್ದೆ (ಮಿಸಾ)ಯಡಿ 15 ತಿಂಗಳುಗಳ ಕಾಲ ಜೈಲಿನಲ್ಲಿದ್ದೆ. ಆವಾಗಿನ ತುರ್ತುಪರಿಸ್ಥಿತಿಯ ಬಗ್ಗೆ ಈಗ ಮಾತನಾಡುತ್ತಿರುವ ಹಲವು ಬಿಜೆಪಿ ಸಚಿವರು ನನಗೆ ಹಾಗೂ ನನ್ನ ಸಹದ್ಯೋಗಿಗಳಿಗೆ ಗೊತ್ತೇ ಇರಲಿಲ್ಲ. ಇಂದು ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ನಮಗೆ ಉಪನ್ಯಾಸ ನೀಡುತ್ತಿರುವ ಮೋದಿ, ಜೆ.ಪಿ. ನಡ್ಡಾ ಹಾಗೂ ಅವರ ಇತರ ಸಂಪುಟ ಸಹದ್ಯೋಗಿಗಳ ಹೆಸರನ್ನು ಆಗ ನಾವು ಕೇಳಿಯೇ ಇರಲಿಲ್ಲ’’ ಎಂದು ಲಾಲು ಪ್ರಸಾದ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ ಇಂದಿರಾಗಾಂಧಿ ನಮ್ಮನ್ನು ಜೈಲುಕಂಬಿಗಳ ಹಿಂದೆ ಇರಿಸಿದರು. ಆದರೆ ಅವರು ಯಾವತ್ತೂ ನಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳಲಿಲ್ಲ. ಆಕೆಯಾಗಲಿ ಅಥವಾ ಅವರ ಸಚಿವರಾಗಲಿ ನಮ್ಮನ್ನು ದೇಶದ್ರೋಹಿಗಳು ಅಥವಾ ದೇಶಭಕ್ತಿಹೀನರು ಎಂದು ಎಂಬುದಾಗಿ ಕರೆದಿರಲಿಲ್ಲ. ನಮ್ಮ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕಗಳನ್ನು ವಿರೂಪಗೊಳಿಸಲು ಕಿಡಿಗೇಡಿಗಳಿಗೆ ಅವಕಾಶ ನೀಡಲಿಲ್ಲ. 1975ನೇ ಇಸವಿಯು ನಮ್ಮ ಪ್ರಜಾಪ್ರಭುತ್ವದ ಮೇಲಿನ ಕಳಂಕವಾಗಿದೆ. ಆದರೆ 2024ರಲ್ಲಿ ಪ್ರತಿಪಕ್ಷವನ್ನು ಗೌರವಿಸದವರನ್ನು ಮರೆಯದೆ ಇರೋಣ” ಎಂದು ಆರ್ ಜೆ ಡಿ ನಾಯಕ ತಿಳಿಸಿದರು.
1975ರ ಜೂನ್ 25ರಂದು ಆಗಿನ ಪ್ರಧಾನಿ ಇಂದಿರಾಗಾಂಧಿ, 21 ತಿಂಗಳುಗಳ ಕಾಲ ತುರ್ತುಪರಿಸ್ಥಿತಿಯನ್ನು ಹೇರಿದ್ದರು. ಈಗ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆಯನ್ನು ನಡೆಸಲಾಗುತ್ತಿದೆ. ತುರ್ತು ಪರಿಸ್ಥಿತಿಯು ಭಾರತೀಯ ರಾಜಕೀಯ ಇತಿಹಾಸದ ಅತ್ಯಂತ ವಿವಾದಾತ್ಮಕ ಅವಧಿಯೆಂದೇ ಪರಿಗಣಿಸಲ್ಪಟ್ಟಿದೆ.







