ವಯನಾಡ್ ಭೇಟಿ ʼಸ್ಮರಣೀಯʼ ಎಂದು ಟ್ರೋಲ್ ಗೆ ಒಳಗಾದ ಶಶಿ ತರೂರ್
ಕಾಂಗ್ರೆಸ್ ಸಂಸದನ ಪ್ರತಿಕ್ರಿಯೆ ಏನು?

ತಿರುವನಂತಪುರ: ಭೂಕುಸಿದಿಂದ ಜರ್ಜರಿತವಾಗಿರುವ ವಯನಾಡ್ಗೆ ನೀಡಿದ ಭೇಟಿಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು 'ಸ್ಮರಣೀಯ' ಎಂದು ಬಣ್ಣಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 300ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಈ ದುರಂತ ಸ್ಥಳಕ್ಕೆ ಭೇಟಿ ನೀಡಿದ ತರೂರ್ ತಮ್ಮ ಅನುಭವ ಮತ್ತು ಕಚೇರಿ ವತಿಯಿಂದ ನಡೆಯುತ್ತಿರುವ ಪರಿಹಾರ ಕಾರ್ಯಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ನಾಯಕ ಹಾಗೂ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಸೇರಿದಂತೆ ಹಲವು ಮಂದಿ ಶಶಿ ತರೂರ್ ಬಳಸಿದ ಪದಗಳ ಆಯ್ಕೆ ಬಗ್ಗೆ ವ್ಯಾಪಕವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ ತರೂರ್ ಸ್ಪಷ್ಟನೆ ನೀಡಿದ್ದಾರೆ. ಇಂಥ ದುರಂತಮಯ ಘಟನೆ ಬಗ್ಗೆ ತರೂರ್ ಬಳಸಿದ ಪದಗಳು ಸೂಕ್ತವಲ್ಲ ಎಂದು ಬಣ್ಣಿಸಿದ್ದರು.
ಆದರೆ ಎಕ್ಸ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ತರೂರ್, "ಸ್ಮರಣೀಯ" ಎಂಬ ಪದದ ನಿಜವಾದ ಅರ್ಥ ಸ್ಮರಣೀಯ ಸ್ವರೂಪದ ಮರೆಯಲಾಗದ ಘಟನೆ ಎಂಬುದಾಗಿ ಸಮರ್ಥಿಸಿಕೊಂಡಿದ್ದಾರೆ.
ತರೂರ್ ಅವರು ಎಕ್ಸ್ ಪ್ಲಾಟ್ಫಾರಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಪರಿಹಾರ ಸಾಮಗ್ರಿ ಸರಬರಾಜು ಮತ್ತು ಸಂತ್ರಸ್ತ ಜನತೆಯನ್ನು ಭೇಟಿ ಮಾಡಿದ್ದನ್ನು ಬಿಂಬಿಸಿದ್ದಾರೆ.
"ಟ್ರೋಲ್ ಮಾಡಿದ ಎಲ್ಲರಿಗೆ, 'ಸ್ಮರಣೀಯ ಎಂಬುದರ ಅರ್ಥ: ವಿಶೇಷ ಅಥವಾ ಮರೆಯಲಾಗದ ಸ್ವರೂಪದ ಘಟನೆಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ, ಇಟ್ಟುಕೊಳ್ಳಬಹುದಾದ ಘಟನೆ" ಎಂದು ಸ್ಪಷ್ಟನೆ ನೀಡಿದ್ದಾರೆ.