ನನಗೂ ಮೂವರು ಹೆಣ್ಣು ಮಕ್ಕಳಿದ್ದಾರೆ, ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ: ಅತ್ಯಾಚಾರ ಆರೋಪಿ ಸಂಜಯ್ ರಾಯ್ ತಾಯಿ ಹೇಳಿಕೆ
ಕೋಲ್ಕತ್ತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ

ಆರೋಪಿ ಸಂಜಯ್ ರಾಯ್
ಕೋಲ್ಕತ್ತಾ: ಇಲ್ಲಿನ ಸ್ಥಳೀಯ ಸೀಲ್ಡಾ ನ್ಯಾಯಾಲಯದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಸಂಭುನಾಥ್ ಪಂಡಿತ್ ಲೇನ್ನಲ್ಲಿರುವ ತಮ್ಮ ಮನೆಯ ಬಾಗಿಲಿನ ಬಳಿ ಕುಳಿತಿದ್ದ ಮಾಲತಿ ರಾಯ್, ತಮ್ಮ ಮಗ ಸಂಜಯ್ ರಾಯ್ ಆರೋಪಿಯಾಗಿದ್ದ ಆರ್ ಜಿ ಕರ್ ಆಸ್ಪತ್ರೆಯ ಅತ್ಯಾಚಾರ-ಕೊಲೆ ಪ್ರಕರಣದ ತೀರ್ಪಿಗಾಗಿ ಕಾಯುತ್ತಿದ್ದರು.
ನ್ಯಾಯಾಲಯವು ಸಂಜಯ್ ರಾಯ್ ನನ್ನು ತಪ್ಪಿತಸ್ಥನೆಂದು ಘೋಷಿಸಿದೆ ಎಂದು ಹೇಳಿದಾಗ, ಮಾಲತಿ, "ನನಗೂ ಮೂವರು ಹೆಣ್ಣು ಮಕ್ಕಳಿದ್ದಾರೆ, ಅವರ (ಸಂತ್ರಸ್ತೆಯ ಹೆತ್ತವರ) ನೋವು ನನಗೆ ಅರ್ಥವಾಗಿದೆ. ... ಅವನಿಗೆ ಅರ್ಹವಾದ ಯಾವುದೇ ಶಿಕ್ಷೆ ಸಿಗಲಿ. ನ್ಯಾಯಾಲಯವು ಅವನನ್ನು ಗಲ್ಲಿಗೇರಿಸಲು ಹೇಳಿದರೂ, ನಾನು ಅದನ್ನು ಸ್ವೀಕರಿಸುತ್ತೇನೆ," ಎಂದು ಭಾವುಕರಾದರು ಎಂದು indianexpress.com ವರದಿ ಮಾಡಿದೆ.
ಲೇನ್ನ ಕೆಳಗೆ ವಾಸಿಸುವ ರಾಯ್ ನ ಸಹೋದರಿ ಸಬಿತಾ, "ನನ್ನ ಸಹೋದರ ಮಾಡಿದ್ದು ಯೋಚಿಸಲಾಗದ ಮತ್ತು ಭಯಾನಕ ಸಂಗತಿ. ಇದನ್ನು ಹೇಳುವಾಗ ನನ್ನ ಹೃದಯ ಒಡೆಯುತ್ತದೆ. ಅವನು ಕೃತ್ಯದಲ್ಲಿ ಪಾಲ್ಗೊಂಡಿದ್ದೇ ಆದರೆ ಅವನಿಗೆ ಸರಿಯಾದ ಶಿಕ್ಷೆ ಸಿಗಬೇಕು. ಸಂತ್ರಸ್ತೆ ನನ್ನಂತೆಯೇ ಮಹಿಳೆ ಮತ್ತು ವೈದ್ಯರಾಗಿದ್ದರು," ಎಂದರು.
ಸಂಜಯ್ ರಾಯ್ ಬಂಧನದಲ್ಲಿದ್ದಾಗ ಆತನ ತಾಯಿ ಮತ್ತು ಸಹೋದರಿ ಭೇಟಿ ಮಾಡಲು ಬಂದಿರಲಿಲ್ಲ. ರಾಯ್ ಎಸಗಿದ ಕೃತ್ಯದ ಬಗ್ಗೆ ಅವರು ಮೊದಲಿನಿಂದಲೂ ವಿರೋಧಿಸಿದ್ದರು.





