ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ನಿವಾಸದ ತನ್ನ ಹಳೆಯ ವಿಳಾಸಕ್ಕೇ ಮರಳಿದ ಡಬ್ಲ್ಯುಎಫ್ಐ ಕಚೇರಿ!

ಬ್ರಿಜ್ ಭೂಷಣ್ | PC : PTI
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ವು ದಿಲ್ಲಿಯ 21,ಅಶೋಕ ರಸ್ತೆಯ ತನ್ನ ಹಳೆಯ ವಿಳಾಸಕ್ಕೆ ಮರಳಿದ್ದು, ಅಲ್ಲಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಮತ್ತು ಐದು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ಭೂಷಣ್ ಶರಣ ಸಿಂಗ್ ಅವರು ದೀರ್ಘಾವಧಿಯಿಂದ ಇದೇ ಮನೆಯಲ್ಲಿ ವಾಸವಾಗಿದ್ದಾರೆ.
ದೇಶದ ಕೆಲವು ಅಗ್ರ ಮಹಿಳಾ ಕುಸ್ತಿಪಟುಗಳಿಂದ ತನ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳ ಹಿನ್ನೆಲೆಯಲ್ಲಿ ಸಿಂಗ್ ಕಳೆದ ವರ್ಷದ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ದಿಲ್ಲಿಯಲ್ಲಿರುವಾಗ ಇದೇ ಮನೆಯಲ್ಲಿ ತನ್ನ ವಾಸ್ತವ್ಯವನ್ನು ಅವರು ಮುಂದುವರಿಸಿದ್ದಾರೆ. ಅವರ ಪುತ್ರ ಕರಣ ಭೂಷಣ್ ಸಿಂಗ್ ಉತ್ತರ ಪ್ರದೇಶದಲ್ಲಿಯ ತನ್ನ ಕುಟುಂಬದ ಕ್ಷೇತ್ರ ಕೈಸರ್ಗಂಜ್ನಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ದಿಲ್ಲಿ ನ್ಯಾಯಾಲಯದಲ್ಲಿ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳ ವಿಚಾರಣೆ ನಡೆಯುತ್ತಿದೆ. ಅವರ ವಿರುದ್ಧ ಆರೋಪಗಳನ್ನೂ ರೂಪಿಸಲಾಗಿದೆ. ಹೀಗಿದ್ದರೂ ಡಬ್ಲ್ಯುಎಫ್ಐ ಅವರೊಂದಿಗೆ ತನ್ನ ಸಂಬಂಧವನ್ನು ಮುರಿದುಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.
2023, ಡಿಸೆಂಬರ್ನಲ್ಲಿ ಡಬ್ಲ್ಯುಎಫ್ಐನ್ನು ಅಮಾನತುಗೊಳಿಸಿದ್ದ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು, ಮಾಜಿ ಪದಾಧಿಕಾರಿಗಳ ನಿಯಂತ್ರಣದಲ್ಲಿರುವ ಕಟ್ಟಡದಿಂದ ಅದು ಕಾರ್ಯ ನಿರ್ವಹಿಸುತ್ತಿರುವುದು ತನ್ನ ಕ್ರಮಕ್ಕೆ ಕಾರಣಗಳಲ್ಲೊಂದಾಗಿದೆ ಎಂದು ಉಲ್ಲೇಖಿಸಿತ್ತು.
ದಿಲ್ಲಿ ಪೋಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ ತಮಗೆ ಲೈಂಗಿಕ ಕಿರುಕುಳ ಘಟನೆಗಳು ಸಂಸದರಾಗಿ ಸಿಂಗ್ ಅವರ ಅಧಿಕೃತ ನಿವಾಸ(21,ಅಶೋಕ ರಸ್ತೆ)ದಲ್ಲಿಯ ಡಬ್ಲ್ಯುಎಫ್ಐ ಕಚೇರಿಯಲ್ಲಿ ನಡೆದಿದ್ದವು ಎಂದು ಆರೋಪಿಸಿದ್ದಾರೆ.
2023ರಲ್ಲಿ ಡಬ್ಲ್ಯುಎಫ್ಐ ವಿರುದ್ಧ ಸಚಿವಾಲಯ ಕ್ರಮ ಕೈಗೊಂಡ ಕೆಲವೇ ವಾರಗಳಲ್ಲಿ ಅದರ ಕಚೇರಿಯು ಹರಿನಗರದಲ್ಲಿಯ ಒಂದು ಕೋಣೆಯ ಆವರಣಕ್ಕೆ ಸ್ಥಳಾಂತರಗೊಂಡಿತ್ತು. ಈಗ ಬ್ರಿಜ್ಭೂಷಣ್ ನಿವಾಸಕ್ಕೆ ಮರಳಿದ್ದರೂ ಡಬ್ಲ್ಯುಎಫ್ಐನ ಅಧಿಕೃತ ವೆಬ್ಸೈಟ್ನ ಹೋಮ್ಪೇಜ್ನಲ್ಲಿ ಅದರ ವಿಳಾಸವು 101,ಹರಿನಗರ, ಆಶ್ರಮ ಚೌಕ್, ಹೊಸದಿಲ್ಲಿ-110014 ಎಂದೇ ಉಳಿದುಕೊಂಡಿದೆ.
ಕಳೆದ ವರ್ಷದ ಜುಲೈನಲ್ಲಿ ವರದಿಗಾರರು ಹರಿನಗರದ ಈ ವಿಳಾಸಕ್ಕೆ ಭೇಟಿ ನೀಡಿದ್ದಾಗ ಕಟ್ಟಡದ ಪ್ರವೇಶದ್ವಾರದಲ್ಲಿಯ ನಾಮಫಲಕ ಮತ್ತು ಸಣ್ಣಕೋಣೆಯ ಬಾಗಿಲಿನ ಮೇಲೆ ಡಬ್ಲ್ಯುಎಫ್ಐ ಎಂದು ಬರೆಯಲಾಗಿತ್ತು,ಆದರೆ ಬಾಗಿಲಿಗೆ ಬೀಗ ಜಡಿದಿತ್ತು. ಡಬ್ಲ್ಯುಎಫ್ಐ ಈ ಸ್ಥಳವನ್ನು ತೆರವುಗೊಳಿಸಿದೆ ಎಂದು ಕೋಣೆಯ ಮಾಲಿಕರು ತಿಳಿಸಿದ್ದರು.







