ಶರ್ಮಿಷ್ಠಾ ಪನೋಲಿ ವಿರುದ್ಧ ದೂರು ದಾಖಲಿಸಿದ್ದ ವಜಾಹತ್ ಖಾನ್ ರನ್ನು ಬಂಧಿಸಿದ ಕೋಲ್ಕತ್ತಾ ಪೊಲೀಸರು

ಶರ್ಮಿಷ್ಠಾ ಪನೋಲಿ / ವಜಾಹತ್ ಖಾನ್ (Photo credit: indiatoday.in)
ಕೋಲ್ಕತ್ತಾ : ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಆಕ್ಷೇಪಾರ್ಹ ಹೇಳಿಕೆ ನೀಡಿದ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್, ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ವಿರುದ್ಧ ದೂರು ನೀಡಿದ್ದ ವಜಾಹತ್ ಖಾನ್ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ದ್ವೇಷ ಭಾಷಣ ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕೋಲ್ಕತ್ತಾದ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ವಜಾಹತ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಎಫ್ಐಆರ್ ಬಳಿಕ ಮೂರು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ವಜಾಹತ್ ಖಾನ್ಗೆ ಪೊಲೀಸರು ಸೂಚಿಸಿದ್ದರು.
ಆಪರೇಷನ್ ಸಿಂಧೂರ್ ಕುರಿತ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ವೀಡಿಯೊ ಮೂಲಕ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಈ ಮೊದಲು ಗಾರ್ಡನ್ ರೀಚ್ ಪೊಲೀಸ್ ಠಾಣೆಗೆ ವಜಾಹತ್ ಖಾನ್ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೇ.30ರಂದು ಹರ್ಯಾಣದ ಗುರುಗ್ರಾಮ್ನಲ್ಲಿ ಶರ್ಮಿಷ್ಠಾ ಪನೋಲಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಆ ಬಳಿಕ ಕಲ್ಕತ್ತಾ ಹೈಕೋರ್ಟ್ ಆಕೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ʼಪನೋಲಿ ಬಂಧನದ ನಂತರ ವಜಾಹತ್ ಖಾನ್ ನಾಪತ್ತೆಯಾಗಿದ್ದಾರೆ. ನಮ್ಮ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆʼ ಎಂದು ಅವರ ತಂದೆ ಸಾದತ್ ಖಾನ್ ಆರೋಪಿಸಿದ್ದರು.