ಭಾರತದಲ್ಲಿ ಕ್ರೈಸ್ತರ ವಿರುದ್ಧ ‘ಉದ್ದೇಶಿತ ಹಿಂಸಾಚಾರ’ ಕುರಿತು ಯುಸಿಎಫ್ನಿಂದ ವ್ಯಾಟಿಕನ್ಗೆ ಅಹವಾಲು; ವರದಿ

ವ್ಯಾಟಿಕನ್ ವಿದೇಶಾಂಗ ಸಚಿವ ಪೌಲ್ ರಿಚರ್ಡ್ ಗಲಾಘರ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (X/@DrSJaishankar)
ಹೊಸದಿಲ್ಲಿ: ಭಾರತದಲ್ಲಿ ಕ್ರೈಸ್ತರ ವಿರುದ್ಧ ‘ಉದ್ದೇಶಿತ ಹಿಂಸೆ ಮತ್ತು ದ್ವೇಷ’ ಹೆಚ್ಚುತ್ತಿರುವ ಕುರಿತು ನಾಗರಿಕ ಸಮಾಜ ಗುಂಪು ಯುನೈಟೆಡ್ ಕ್ರಿಶ್ಚಿಯನ್ ಫೋರಂ(ಯುಸಿಎಫ್) ವ್ಯಾಟಿಕನ್ಗೆ ಅಹವಾಲು ಸಲ್ಲಿಸಿದೆ ಎಂದು The Hindu ವರದಿ ಮಾಡಿದೆ.
ಭಾರತೀಯ ಅಧಿಕಾರಿಗಳು ಮತ್ತು ಚರ್ಚ್ ಪದಾಧಿಕಾರಿಗಳನ್ನು ಭೇಟಿಯಾಗಲು ಭಾರತಕ್ಕೆ ಆಗಮಿಸಿದ್ದ ವ್ಯಾಟಿಕನ್ ವಿದೇಶಾಂಗ ಸಚಿವ ಪೌಲ್ ರಿಚರ್ಡ್ ಗಲಾಘರ್ ಅವರಿಗೆ ಗುರುವಾರ ಈ ಅಹವಾಲನ್ನು ಸಲ್ಲಿಸಿರುವ ಯುಸಿಎಫ್ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ಸಂದರ್ಭದಲ್ಲಿ ಕ್ರೈಸ್ತರ ಮೇಲಿನ ದಾಳಿಗಳನ್ನು ಪ್ರಸ್ತಾವಿಸುವಂತೆ ಆಗ್ರಹಿಸಿದೆ.
ಗುರುವಾರ ಆರ್ಚ್ಬಿಷಪ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿದ್ದರು.
ಜ.10ರಂದು ಯುಸಿಎಫ್ ಬಿಡುಗಡೆಗೊಳಿಸಿದ್ದ ವರದಿಯು, 2014ರಲ್ಲಿ 127ರಷ್ಟಿದ್ದ ಕ್ರೈಸ್ತರ ಮೇಲಿನ ದಾಳಿಗಳ ಸಂಖ್ಯೆಯು 2024ರಲ್ಲಿ 834ಕ್ಕೆ ಏರಿಕೆಯಾಗಿದೆ ಎಂದು ಹೇಳಿತ್ತು.
ಗಲಾಘರ್ ಅವರಿಗೆ ಸಲ್ಲಿಸಿರುವ ಅಹವಾಲಿನಲ್ಲಿ ಕೈಸ್ತರ ವಿರುದ್ಧ ಹಿಂಸಾಚಾರ ಮತ್ತು ದ್ವೇಷ ಘಟನೆಗಳ ಹೆಚ್ಚಳ ಕುರಿತು ತನ್ನ ವರದಿಯನ್ನು ಉಲ್ಲೇಖಿಸಿರುವ ಯುಸಿಎಫ್, ಮೋಸದ ಮತಾಂತರಗಳ ಸುಳ್ಳು ಆರೋಪಗಳು ಈ ದಾಳಿಗಳಿಗೆ ಕಾರಣವಾಗಿವೆ ಎಂದು ತಿಳಿಸಿದೆ.
ಉತ್ತರ ಪ್ರದೇಶ ಮತ್ತು ಛತ್ತೀಸ್ಗಡ ಇಂತಹ ಆರೋಪಗಳಿಂದಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರ ಮೇಲೆ ದಾಳಿಗಳು ನಡೆದಿರುವ ಅಥವಾ ಪೋಲಿಸರು ಅವರನ್ನು ಕಾನೂನುಬಾಹಿರವಾಗಿ ಬಂಧಿಸಿರುವ ಪ್ರಮುಖ ರಾಜ್ಯಗಳಾಗಿವೆ ಎಂದು ಯುಸಿಎಫ್ ತನ್ನ ವರದಿಯನ್ನು ಉಲ್ಲೇಖಿಸಿ ಹೇಳಿದೆ.
ಉತ್ತರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಥೋಲಿಕ್ ಪಾದ್ರಿಗಳು ಮತ್ತು ನನ್ಗಳು ಬಂಧನ,ದಾಳಿ ಮತ್ತು ಕಾನೂನು ಕ್ರಮಗಳನ್ನು ಎದುರಿಸುತ್ತಿದ್ದು,ಇದು ಮಿಷನರಿಗಳಿಗೆ ಆತಂತಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಅಹವಾಲಿನಲ್ಲಿ ತಿಳಿಸಲಾಗಿದೆ.
ದೈಹಿಕ ಮತ್ತು ಮಾನಸಿಕ ಹಿಂಸೆ ಅಸಹನೀಯವಾಗಿದ್ದರೂ, ಕ್ರೈಸ್ತರ ಧಾರ್ಮಿಕ ಹಕ್ಕುಗಳ ನಿರಾಕರಣೆ ಹೆಚ್ಚು ಆತಂಕಕಾರಿಯಾಗಿದೆ,ಅದು ಸಾಂವಿಧಾನಿಕ ಉಲ್ಲಂಘನೆಯಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಂಜಾಬಿನ ಬಠಿಂಡಾದ ಕೆಥೋಲಿಕ್ ಧರ್ಮಗುರು ಜೋಸ್ ವಲ್ಲಿಕ್ಕಾಟ್ ಹೇಳಿದರು.







