ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅನಿರೀಕ್ಷಿತ ರಾಜೀನಾಮೆ: ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ...

ಜಗದೀಪ್ ಧನ್ಕರ್ (Photo: PTI)
ಹೊಸದಿಲ್ಲಿ: "ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ದಿಢೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಆಘಾತಕಾರಿ ಹಾಗೂ ಅನಿರೀಕ್ಷಿತವಾಗಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರಕಟನೆ ಬಿಡುಗಡೆ ಮಾಡಿರುವ ಜೈರಾಮ್ ರಮೇಶ್, "ನಾನು ಇನ್ನಿತರ ಹಲವಾರು ಸಂಸದರೊಂದಿಗೆ ಸಂಜೆ 5ರವರೆಗೆ ಅವರೊಂದಿಗಿದ್ದೆ. ಸಂಜೆ 7.30ರ ಹೊತ್ತಿನಲ್ಲಿ ನಾನು ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದೇ ಕೂಡಾ. ಆದರೆ, ಈ ವೇಳೆ ಯಾವುದೇ ಅನಿರೀಕ್ಷಿತ ಸೂಚನೆಯ ಕುರಿತು ನನಗೆ ತಿಳಿದು ಬರಲಿಲ್ಲ" ಎಂದು ಹೇಳಿದ್ದಾರೆ.
ಧನ್ಕರ್ ಅವರು ತಮ್ಮ ರಾಜೀನಾಮೆಗೆ ಆರೋಗ್ಯ ಸಮಸ್ಯೆ ಕಾರಣ ಎಂದು ಉಲ್ಲೇಖಿಸಿದ್ದರೆ, ಜೈರಾಮ್ ರಮೇಶ್ ಮಾತ್ರ "ಕಣ್ಣೋಟಕ್ಕೆ ಕಾಣದ ಯಾವುದೋ ಕಾರಣವಿದ್ದಂತಿದೆ" ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
"ಜಗದೀಪ್ ಧನ್ಕರ್ ಅವರು ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಕಣ್ಣೋಟಕ್ಕೆ ಮೀರಿದ ಯಾವುದೋ ಕಾರಣವಿದ್ದಂತಿದೆ" ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಇದು ಊಹಾಪೋಹಕ್ಕೆ ಸಮಯವೂ ಅಲ್ಲ ಎಂದೂ ಅವರು ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ (ಸೋಮವಾರ) ರಾತ್ರಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ದಿಢೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಬಿರುಗಾಳಿಯೆಬ್ಬಿಸಿದೆ. ಜಗದೀಪ್ ಧನ್ಕರ್ ಅವರ ಈ ಅನಿರೀಕ್ಷಿತ ನಡೆಯ ಕುರಿತು ಎಲ್ಲ ರಾಜಕೀಯ ಪಕ್ಷಗಳೂ ಪಕ್ಷಾತೀತವಾಗಿ ಆಘಾತ ವ್ಯಕ್ತಪಡಿಸಿವೆ.
ಮಂಗಳವಾರ ಮಧ್ಯಾಹ್ನ 1 ಗಂಟೆಗೆ ರಾಜ್ಯಸಭಾ ಕಲಾಪಗಳ ಸಮಿತಿ ಸಭೆಯನ್ನು ನಡೆಸಬೇಕಿತ್ತು. ಇದರೊಂದಿಗೆ ನ್ಯಾಯಾಂಗದ ಕುರಿತು ಅವರು ಮಹತ್ವದ ಕ್ರಮವೊಂದನ್ನು ಪ್ರಕಟಿಸಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅವರ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ.







