ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ನಮ್ಮ ಯಾವುದೇ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ : ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ್ ಕುರಿತು ಸಂಸತ್ತಿಗೆ ಮಾಹಿತಿ ನೀಡಿದ ರಕ್ಷಣಾ ಸಚಿವ

ರಾಜನಾಥ್ ಸಿಂಗ್ (Photo: PTI)
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತೀಯ ಸಶಸ್ತ್ರ ಪಡೆಗಳಿಗೆ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕಾರ್ಯಾಚರಣೆ ವೇಳೆ ನಮ್ಮ ಯಾವುದೇ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಭಯೋತ್ಪಾದನೆಯ ರೂಪದಲ್ಲಿ ಪರೋಕ್ಷ ಯುದ್ಧ ನಡೆಸಿದ್ದಕ್ಕಾಗಿ ಪಾಕಿಸ್ತಾನವನ್ನು ಶಿಕ್ಷಿಸುವುದಾಗಿತ್ತು. ಅದಕ್ಕಾಗಿಯೇ ಸಶಸ್ತ್ರ ಪಡೆಗಳಿಗೆ ತಮ್ಮ ಗುರಿಗಳನ್ನು ಆಯ್ಕೆ ಮಾಡಲು ಮತ್ತು ಬಲವಾದ ಪ್ರತಿಕ್ರಿಯೆ ನೀಡಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿತ್ತು ಎಂದು ಹೇಳಿದರು.
ಆಪರೇಷನ್ ಸಿಂಧೂರ್ನ ಉದ್ದೇಶ ಯುದ್ಧವನ್ನು ಪ್ರಾರಂಭಿಸುವುದು ಅಲ್ಲ, ಆದರೆ ಎದುರಾಳಿಯನ್ನು ಹಿಮ್ಮೆಟ್ಟುವಂತೆ ಮಾಡುವ ರೀತಿಯಲ್ಲಿ ಬಲಪ್ರಯೋಗವನ್ನು ಮಾಡುವುದಾಗಿತ್ತು. ಮೇ 10ರ ಬೆಳಿಗ್ಗೆ ಭಾರತೀಯ ಸೇನೆಯು ಪಾಕಿಸ್ತಾನದ ಹಲವಾರು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಾಗ ಪಾಕಿಸ್ತಾನ ಸೋಲನ್ನು ಒಪ್ಪಿಕೊಂಡಿತು. ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸಿತು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಯಾವುದೇ ಪ್ರಮುಖ ಆಸ್ತಿಗೆ ಹಾನಿಯಾಗಿಲ್ಲ. ಸಶಸ್ತ್ರ ಪಡೆಗಳು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತ್ತು ಎಂದು ಇದೇ ವೇಳೆ ರಾಜನಾಥ್ ಸಿಂಗ್ ಹೇಳಿದ್ದಾರೆ.







