ಕರ್ನಾಟಕ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್
ಬೆಂಗಳೂರಿನಲ್ಲಿ ವಿದ್ಯುತ್ ತಗುಲಿ ತಾಯಿ, ಮಗು ಸಾವು ಪ್ರಕರಣ
ಹೊಸದಿಲ್ಲಿ: ಬೆಂಗಳೂರಿನ ಕಾಡುಗೋಡಿ ಪ್ರದೇಶದ ಹೋಪ್ ಫಾರ್ಮ್ ಸಮೀಪ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ವಿದ್ಯುತ್ ತಂತಿ ತುಳಿದು ತಾಯಿ, ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಆಯೋಗ (ಎನ್ಎಚ್ಆರ್ಸಿ) ಕರ್ನಾಟಕ ಸರಕಾರಕ್ಕೆ ನೋಟಿಸು ರವಾನಿಸಿದೆ.
ನ.19ರಂದು 23 ವರ್ಷದ ತಾಯಿ ಹಾಗೂ ಆಕೆಯ 9 ತಿಂಗಳ ಮಗು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆ ಕುರಿತು ಸ್ಪಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್ಎಚ್ಆರ್ಸಿ, ಕರ್ನಾಟಕದ ಮುಖ್ಯ ಕಾರ್ಯದರ್ಶಿ, ಡಿಜಿಪಿಯವರಿಗೆ ನೋಟಿಸು ನೀಡಿದೆ. ಅಲ್ಲದೆ, 6 ವಾರಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಮಾಧ್ಯಮ ವರದಿಗಳು ನಿಜವೆಂದು ಕಂಡು ಬಂದರೆ, ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಬೆಂಗಳೂರಿನ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಎನ್ಎಚ್ಆರ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವರದಿಯು ಎಫ್ಐಆರ್ ಸ್ಥಿತಿಗತಿ, ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮ, ಮೃತಪಟ್ಟವರ ಕುಟುಂಬದ ಸದಸ್ಯರಿಗೆ ನೀಡಲಾದ ಪರಿಹಾರವನ್ನು ಒಳಗೊಂಡಿರಬೇಕು ಎಂದು ಅದು ತಿಳಿಸಿದೆ.
Next Story