ಸರಕಾರಿ ಆಸ್ಪತ್ರೆಯ ಬಳಿ ಶಿರಶ್ಛೇದಗೊಂಡ ಶಿಶುವಿನ ರುಂಡ ಕೊಂಡೊಯ್ಯುತ್ತಿದ್ದ ನಾಯಿ: ಪಂಜಾಬ್ ಸರಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದ ತಿಂಗಳು ಪಟಿಯಾಲ ಜಿಲ್ಲೆಯ ಸರಕಾರ ಆಸ್ಪತ್ರೆಯ ಬಳಿ ಬೀದಿ ನಾಯಿಯೊಂದು ಶಿಶುವಿನ ಶಿರಶ್ಛೇದಗೊಂಡ ರುಂಡವನ್ನು ಕೊಂಡೊಯ್ಯುತ್ತಿದ್ದ ವರದಿಗಳ ಕುರಿತು ಪಂಜಾಬ್ ಸರಕಾರ ಹಾಗೂ ಪೊಲೀಸ್ ಪ್ರಾಧಿಕಾರಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಬುಧವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿದೆ.
ಆಸ್ಪತ್ರೆಯ ಆವರಣದಲ್ಲಿ ಬೀದಿ ನಾಯಿಗಳು ಮುಕ್ತವಾಗಿ ತಿರುಗಾಡುತ್ತಿರುತ್ತವೆ ಎಂದು ರೋಗಿಗಳ ಪರಿಚಾರಕರು ಆರೋಪಿಸಿದ್ದಾರೆ ಎಂದು ವರದಿಯಾಗಿದ್ದು, ಆಸ್ಪತ್ರೆಯಲ್ಲಿ ಕಳಪೆ ಶುಚಿತ್ವ, ಭದ್ರತೆಯ ಕೊರತೆ ಹಾಗೂ ಆಸ್ಪತ್ರೆ ಪ್ರಾಧಿಕಾರಗಳ ನಿರ್ಲಕ್ಷ್ಯದ ಕುರಿತೂ ಅವರು ದೂರಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.
ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, “ಆಗಸ್ಟ್ 26ರಂದು ಪಂಜಾಬ್ ನ ಪಟಿಯಾಲ ಜಿಲ್ಲೆಯಲ್ಲಿನ ರಾಜಿಂದರ್ ಸರಕಾರಿ ಆಸ್ಪತ್ರೆಯ ಬಳಿ ಬೀದಿ ನಾಯಿಯೊಂದು ನವಜಾತ ಶಿಶುವಿನ ಶಿರಶ್ಛೇದಗೊಂಡ ರುಂಡವನ್ನು ಕೊಂಡೊಯ್ಯುತ್ತಿತ್ತು ಎಂಬ ಮಾಧ್ಯಮ ವರದಿಯೊಂದನ್ನು ಆಧರಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳ ಲಾಗಿದೆ” ಎಂದು ತಿಳಿಸಿದೆ.
ಒಂದು ವೇಳೆ ಮಾಧ್ಯಮ ವರದಿಯ ತುಣುಕು ಸತ್ಯವಾಗಿದ್ದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಚಾರವಾಗಿದೆ. ಹೀಗಾಗಿ, ಇನ್ನೆರಡು ವಾರಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಪಂಜಾಬ್ ಸರಕಾರದ ಮುಖ್ಯಾ ಕಾರ್ಯದರ್ಶಿ ಹಾಗೂ ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.
ಆಗಸ್ಟ್ 27ರಂದು ಪ್ರಕಟವಾಗಿದ್ದ ಮಾಧ್ಯಮ ವರದಿಯ ಪ್ರಕಾರ, “ಆಸ್ಪತ್ರೆಯಿಂದ ಯಾವ ಶಿಶುವೂ ಕಾಣೆಯಾಗಿಲ್ಲ. ಇತ್ತೀಚಿನ ಎಲ್ಲ ಶಿಶುಗಳ ಮರಣ ಪ್ರಕರಣಗಳಲ್ಲೂ ಅವುಗಳ ಮೃತ ದೇಹಗಳನ್ನು ಸೂಕ್ತ ದಾಖಲೀಕರಣದೊಂದಿಗೆ ಅವುಗಳ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ” ಎಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ.
ಯಾರಾದರೂ ಮೃತದೇಹದ ಅವಶೇಷಗಳನ್ನು ಆಸ್ಪತ್ರೆಯ ಹೊರಗೆ ಬಿಸಾಡಿರಬಹುದು ಎಂದೂ ಅವರು ಸಂಶಯ ವ್ಯಕ್ತಪಡಿಸಿದ್ದರು ಎಂದೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 30ರಂದು ಪ್ರಕಟವಾಗಿದ್ದ ಮಾಧ್ಯಮ ವರದಿಯ ಪ್ರಕಾರ, ಈ ಘಟನೆಯ ವಿರುದ್ಧ ಸ್ಥಳೀಯ ನಿವಾಸಿಗಳು ಹಾಗೂ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.







