ಯುಜಿಸಿ ಎನ್ಇಟಿ, ಜೆಆರ್ಎಫ್ನಲ್ಲಿ 100% ಅಂಕಗಳೊಂದಿಗೆ ನಿಲುಫಾ ಯಾಸ್ಮಿನ್ ದೇಶಕ್ಕೆ ಟಾಪರ್

ನಿಲುಫಾ ಯಾಸ್ಮಿನ್ (Photo credit: sangbadpratidin.in)
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಬರ್ದ್ವಾನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ನಿಲುಫಾ ಯಾಸ್ಮಿನ್ 2025ರ ಯುಜಿಸಿ ಎನ್ಇಟಿ, ಜೆಆರ್ಎಫ್ ಪರೀಕ್ಷೆಯಲ್ಲಿ100% ಅಂಕಗಳೊಂದಿಗೆ ದೇಶಕ್ಕೆ ಅಗ್ರ ಶ್ರೇಯಾಂಕ ಪಡೆದಿದ್ದಾರೆ.
ಪುರ್ಬಾ ಬರ್ಧಮಾನ್ ಜಿಲ್ಲೆಯ ಕಟ್ವಾದ ಪಾಲಿತಾ ರಸ್ತೆಯ ನಿವಾಸಿಯಾದ ಯಾಸ್ಮಿನ್, ಮಧ್ಯಯುಗದಲ್ಲಿ ಸಂಗೀತ ಮತ್ತು ಸಾಹಿತ್ಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
ಮೂರನೇ ಪ್ರಯತ್ನದಲ್ಲಿ ಎನ್ಇಟಿ, ಜೆಆರ್ಎಫ್ನಲ್ಲಿ ಯಾಸ್ಮಿನ್ ದೇಶಕ್ಕೆ ಅಗ್ರ ಶ್ರೇಯಾಂಕವನ್ನು ಪಡೆದಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಯಾಸ್ಮಿನ್, ಈ ಫಲಿತಾಂಶದಿಂದ ಸಂತೋಷವಾಗಿದೆ. ನಾನು ದೇಶಕ್ಕೆ ಟಾಪರ್ ಆಗುತ್ತೇನೆಂದು ನಿರೀಕ್ಷಿಸಿರಲಿಲ್ಲ. ಪ್ರಾಧ್ಯಾಪಕರಾದ ರಾಮೆನ್ಕುಮಾರ್ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದಿದ್ದೇನೆ. ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ತಂದೆ ಮತ್ತು ಮಾಜಿ ಶಾಲಾ ಶಿಕ್ಷಕಿಯಾಗಿದ್ದ ತಾಯಿ ನನ್ನ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಯಾಸ್ಮಿನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ನಲ್ಲಿ ಯಾಸ್ಮಿನ್ ಅವರನ್ನು ಅಭಿನಂದಿಸಿದ್ದಾರೆ.
Congratulations to Nilufa Yasmin of Katwa in Purba Bardhaman for scoring 100 percentile and securing first position in India in UGC –NET June, 2025 in Bengali and to Rikta Chakraborty of Kolkata for securing second position in India in UGC-NET June, 2025 in Mass Communication and…
— Mamata Banerjee (@MamataOfficial) July 24, 2025







