100 ಮಿಲಿಗ್ರಾಮ್ ಗೂ ಹೆಚ್ಚಿನ ನಿಮೆಸುಲೈಡ್ ಒಳಗೊಂಡ ಔಷಧಿಗಳಿಗೆ ಕೇಂದ್ರದ ನಿಷೇಧ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಡಿ.31: ಕೇಂದ್ರ ಸರ್ಕಾರವು 100 ಮಿಲಿಗ್ರಾಮ್ಗಿಂತ ಹೆಚ್ಚಿನ ನಿಮೆಸುಲೈಡ್ ಒಳಗೊಂಡಿರುವ ಬಾಯಿ ಮೂಲಕ ಸೇವಿಸುವ ಎಲ್ಲ ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಿದೆ.
ಔಷಧಿಗಳ ತಾಂತ್ರಿಕ ಸಲಹಾ ಮಂಡಳಿಯೊಂದಿಗೆ ಸಮಾಲೋಚನೆಯ ಬಳಿಕ, ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ–1940ರ 26ಎ ಕಲಮ್ ನಡಿ ನಿಮೆಸುಲೈಡ್ ಅನ್ನು ನಿಷೇಧಿಸಲಾಗಿದೆ.
ತಕ್ಷಣವೇ ಬಿಡುಗಡೆಗೊಳ್ಳುವ ರೂಪದಲ್ಲಿಯ 100 ಮಿಲಿಗ್ರಾಮ್ಗಿಂತ ಹೆಚ್ಚಿನ ನಿಮೆಸುಲೈಡ್ ಒಳಗೊಂಡಿರುವ ಔಷಧಿಗಳು ಮನುಷ್ಯರಿಗೆ ಅಪಾಯಕಾರಿಯಾಗಿದ್ದು, ಸುರಕ್ಷಿತ ಪರ್ಯಾಯಗಳು ಲಭ್ಯವಿವೆ ಎಂದು ಆರೋಗ್ಯ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ಸ್ಟಿರಾಯ್ಡೇತರ ಉರಿಯೂತ ನಿಗ್ರಹ ಔಷಧಿಯಾಗಿರುವ ನಿಮೆಸುಲೈಡ್ ಯಕೃತ್ತಿಗೆ ಸಂಭಾವ್ಯ ಹಾನಿ ಮತ್ತು ಇತರ ಪ್ರತಿಕೂಲ ಪರಿಣಾಮಗಳಿಗಾಗಿ ಜಾಗತಿಕ ಪರಿಶೀಲನೆಯಲ್ಲಿದೆ. ಸರ್ಕಾರದ ಕ್ರಮವು ಸುರಕ್ಷತಾ ಮಾನದಂಡಗಳನ್ನು ಬಿಗುಗೊಳಿಸುವ ಮತ್ತು ಅಪಾಯಕಾರಿ ಔಷಧಿಗಳನ್ನು ಹಂತಹಂತವಾಗಿ ತೆಗೆದುಹಾಕುವ ಪ್ರಯತ್ನಗಳಿಗೆ ಅನುಗುಣವಾಗಿದೆ.
ನಿಷೇಧವು ಮಾನವ ಬಳಕೆಗಾಗಿ ಹೆಚ್ಚಿನ ಡೋಸ್ನ ಔಷಧಿಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕಡಿಮೆ ಡೋಸ್ನ ಔಷಧಿಗಳು ಹಾಗೂ ಇತರ ಚಿಕಿತ್ಸಾ ಪರ್ಯಾಯಗಳು ಲಭ್ಯವಿರುತ್ತವೆ.







