ಗುವಾಹಟಿ ವಿಶ್ವವಿದ್ಯಾಲಯ ಅಂಕಪಟ್ಟಿ ಹಗರಣ | ಒಂಭತ್ತು ಮಂದಿಯ ಬಂಧನ

ಸಾಂದರ್ಭಿಕ ಚಿತ್ರ
ಬಾರ್ಪೇಟ (ಅಸ್ಸಾಂ): ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯ ಅಂಕಪಟ್ಟಿ ಹಗರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಒಟ್ಟು ಬಂಭತ್ತು ಮಂದಿಯನ್ನು ಬಂಧಿಸಲಾಗಿದೆ.
ಗುವಾಹಟಿ, ಬಾರ್ಪೇಟ ಹಾಗೂ ಧುರ್ಬಿಯ ವಿವಿಧ ಪ್ರದೇಶಗಳಲ್ಲಿ ಬಂಧನ ಕಾರ್ಯಾಚರಣೆ ನಡೆಸಲಾಗಿದ್ದು, ಶುಕ್ರವಾರ ಧುರ್ಬಿಯಲ್ಲಿ ಹೊಸದಾಗಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಗುರುವಾರ ಬಾರ್ಪೇಟಗೆ ಭೇಟಿ ನೀಡಿದ್ದಾಗ, ಈ ವಿಚಾರವನ್ನು ಬಹಿರಂಗಗೊಳಿಸಿದ್ದರು. ಈ ಕುರಿತು ಮಾಹಿತಿ ನೀಡಿದ್ದ ಅವರು, "ಗಣಕೀಕೃತ ಅಂಕಪಟ್ಟಿ ವ್ಯವಸ್ಥೆಯನ್ನು ನಿರ್ವಹಿಸುವವರು ಹಣ ತೆಗೆದುಕೊಂಡು ಅಂಕಗಳನ್ನು ಹೆಚ್ಚಳ ಮಾಡುತ್ತಿದ್ದಾರೆ. ಗುವಾಹಟಿ ವಿಶ್ವವಿದ್ಯಾಲಯ ಬಳಸುತ್ತಿರುವ ಗಣಕೀಕೃತ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಕಾರ್ಯನಿರ್ವಾಹಕ ಕೂಡಾ ಅಂಕಗಳನ್ನು ತಿದ್ದಬಹುದಾಗಿದೆ" ಎಂದು ಹೇಳಿದ್ದರು.
ಶುಕ್ರವಾರದಂದು ಧುರ್ಬಿ ಕಾನೂನು ಕಾಲೇಜಿನ ಕಿರಿಯ ಕಂಪ್ಯೂಟರ್ ಸಹಾಯಕನನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ ಒಂಭತ್ತಕ್ಕೆ ಏರಿಕೆಯಾಗಿದೆ ಎಂದು ಬಾರ್ಪೇಟ ಪೊಲೀಸ್ ಮೂಲಗಳು ತಿಳಿಸಿವೆ.
ಬಾರ್ಪೇಟ ರಸ್ತೆಯ ಗಣೇಶ್ ಲಾಲ್ ಚೌಧುರಿ ಕಾಲೇಜಿನ ಆಡಳಿತ ಮಂಡಳಿಯು ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ವ್ಯತ್ಯಯವನ್ನು ಪತ್ತೆ ಹಚ್ಚಿದ ನಂತರ ಈ ಅಂಕಪಟ್ಟಿ ಹಗರಣ ಬೆಳಕಿಗೆ ಬಂದಿತ್ತು.





