ಉತ್ತರ ಕಾಶಿಯಲ್ಲಿ ಮೇಘಸ್ಫೋಟ: ಒಂಬತ್ತು ಕಾರ್ಮಿಕರು ನಾಪತ್ತೆ

Photo credit: PTI
ಉತ್ತರ ಕಾಶಿ (ಉತ್ತರಾಖಂಡ): ರವಿವಾರ ಮುಂಜಾನೆ ಉತ್ತರ ಕಾಶಿ ಜಿಲ್ಲೆಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಗುಂಟ ಸಂಭವಿಸಿದ ಮೇಘಸ್ಫೋಟದಲ್ಲಿ ಸುಮಾರು ಒಂಬತ್ತು ಮಂದಿ ಕೂಲಿ ಕಾರ್ಮಿಕರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕಾಶಿ ಜಿಲ್ಲೆಯ ಯಮುನೋತ್ರಿ ದೇವಾಲಯ ಮಾರ್ಗಕ್ಕೆ ತೆರಳುವ ಬಾರ್ಕೋಟ್ ಪ್ರದೇಶದಲ್ಲಿನ ಸಿಲಾಯಿ ತಿರುವಿನ ಬಳಿ ಭಾರಿ ಮಳೆ ಹಾಗೂ ಮೇಘ ಸ್ಫೋಟ ಸಂಭವಿಸಿದ ಪರಿಣಾಮ, ಈ ಕೂಲಿ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿಯಂತ್ರಣ ಕೊಠಡಿಯ ಮೂಲಗಳು ತಿಳಿಸಿವೆ.
ಮಧ್ಯರಾತ್ರಿಯ ವೇಳೆ ಯಮುನೋತ್ರಿ ಹೆದ್ದಾರಿಯಲ್ಲಿ ಮೇಘ ಸ್ಫೋಟ ಸಂಭವಿಸಿರುವ ಮಾಹಿತಿಯನ್ನು ಸ್ವೀಕರಿಸಲಾಯಿತು ಎಂದು ಬಾರ್ಕೋಟ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದೀಪಕ್ ಕಥಾಯಿತ್ ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವೊಂದು, ಆ ಸ್ಥಳದಲ್ಲಿ ಕೂಲಿ ಕಾರ್ಮಿಕರು ಬಿಡಾರಗಳನ್ನು ಹಾಕಿಕೊಂಡು, ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದದ್ದು ಕಂಡು ಬಂದಿದೆ. ಅವರೆಲ್ಲ ಭಾರಿ ಮಳೆಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.
ಈವರೆಗೆ ಈ ಘಟನೆಯಲ್ಲಿ ಎಂಟರಿಂದ ಒಂಬತ್ತು ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಎಲ್ಲರೂ ನೇಪಾಳ ಮೂಲದವರಾಗಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಮೇಘ ಸ್ಫೋಟ ಸಂಭವಿಸಿದ ನಂತರ, ಸಿಲಾಯಿ ತಿರುವು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹೆದ್ದಾರಿಯನ್ನು ಮುಚ್ಚಲಾಗಿದೆ.







