ಕೇರಳದಲ್ಲಿ ಮತ್ತೆ ನಿಫಾ ಭೀತಿ: ಹದಿಹರೆಯದ ಬಾಲಕಿ ಮೃತ್ಯು, ಮಹಿಳೆಯ ಸ್ಥಿತಿ ಚಿಂತಾಜನಕ

ಪಾಲಕ್ಕಾಡ್: ಕೇರಳದಲ್ಲಿ ಮತ್ತೆ ಕಾಣಿಸಿಕೊಂಡಿರುವ ಮಾರಣಾಂತಿಕ ನಿಫಾ ವೈರಸ್ ಮಲಪ್ಪುರಂ ನಿವಾಸಿ 18ರ ಹರೆಯದ ಬಾಲಕಿಯೋರ್ವಳನ್ನು ಬಲಿ ತೆಗೆದುಕೊಂಡಿದೆ. ಸೋಂಕಿಗೆ ತುತ್ತಾಗಿರುವ ಪಾಲಕ್ಕಾಡ್ ನ 39ರ ಹರೆಯದ ಮಹಿಳೆಯೋರ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಇಬ್ಬರ ಸ್ಯಾಂಪಲ್ ಗಳನ್ನು ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು,ಅದು ಶುಕ್ರವಾರ ನಿಫಾ ಸೋಂಕನ್ನು ದೃಢಪಡಿಸಿದೆ.
ಬಾಲಕಿ ಜು.1ರಂದು ಕೋಝಿಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಸು ನೀಗಿದ್ದರೆ, ಮಹಿಳೆ ಮಲಪ್ಪುರಮ್ ನ ಪೆರಿಂದಾಲಮನ್ನದಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸ ನಿಫಾ ಪ್ರಕರಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೋಝಿಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಹೆಚ್ಚಿನ ಎಚ್ಚರಿಕೆಯನ್ನು ವಹಿಸುವಂತೆ, ಸಂಘಟಿತ ನಿಯಂತ್ರಣ ಮತ್ತು ಕಣ್ಗಾವಲು ಕ್ರಮಗಳನ್ನು ಆರಂಭಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಮೂರು ಜಿಲ್ಲೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜೂನ್ 28ರಂದು ತೀವ್ರ ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದ ಮಲಪ್ಪುರಮ್ ನ ಮಕ್ಕರಪರಂಬು ನಿವಾಸಿ ಪ್ಲಸ್- II ವಿದ್ಯಾರ್ಥಿನಿಯನ್ನು ಕೋಟಕ್ಕಲ್‌ನ ಖಾಸಗಿ ಆಸ್ಪತ್ರೆಯಿಂದ ಕೋಝಿಕ್ಕೋಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರ ಪ್ರಕಾರ ಆಕೆಯನ್ನು ಆಸ್ಪತ್ರೆಗೆ ತಂದಾಗ ಮಿದುಳು ಸಾವಿಗೀಡಾಗಿದ್ದಳು. ಬಾಲಕಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ 43 ಆರೋಗ್ಯ ಕಾರ್ಯಕರ್ತರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಪಾಲಕ್ಕಾಡ್‌ನ ಮಹಿಳೆ ಪ್ರಸ್ತುತ ವೆಂಟಿಲೇಟರ್ ನಲ್ಲಿದ್ದಾರೆ. ಸುಮಾರು 20 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಬಳಿಕ ಆಕೆ ಪಾಲೋಡ್‌ನ ತನ್ನ ಮನೆ ಸಮೀಪದ ಮತ್ತು ಕರಂಗಲ್ಲತ್ತಾಣಿಯ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆಸ್ಪತ್ರೆಯಿಂದ ಆಸ್ಪತ್ರೆಗೆ ಅವರ ಓಡಾಟವು ಸಂಪರ್ಕ ಪತ್ತೆ ಹಚ್ಚುವಿಕೆ ಮತ್ತು ಅಪಾಯ ಮೌಲ್ಯಮಾಪನದ ವ್ಯಾಪ್ತಿಯನ್ನು ಹೆಚ್ಚಿಸಿದೆ ಎಂದು ಪಾಲಕ್ಕಾಡ್ ನ ಹಿರಿಯ ಆರೋಗ್ಯಾಧಿಕಾರಿಯೋರ್ವರು ತಿಳಿಸಿದರು.
ಆರೋಗ್ಯ ಇಲಾಖೆಯ ಪ್ರಕಾರ ಮಲಪ್ಪುರಮ್‌ನ 211,ಪಾಲಕ್ಕಾಡ್‌ನ 91 ಮತ್ತು ಕೋಝಿಕೋಡ್ ನ 43 ಜನರು ಇಬ್ಬರು ರೋಗಿಗಳೊಂದಿಗೆ ಸಂಪರ್ಕಿತರ ಪಟ್ಟಿಯಲ್ಲಿದ್ದಾರೆ.
ಸಂಪರ್ಕಿತರ ಪಟ್ಟಿಯಲ್ಲಿರುವವರು ಆರೋಗ್ಯ ಕಾರ್ಯಕರ್ತರು ಸೂಚಿಸುವ ದಿನದವರೆಗೂ ಕ್ವಾರಂಟೈನ್ ನಲ್ಲಿ ಇರಬೇಕು ಹಾಗೂ ಕುಟುಂಬ ಸದಸ್ಯರು,ಸಾರ್ವಜನಿಕರು ಇತ್ಯಾದಿ ಜೊತೆ ಸಂವಹನವನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರಲ್ಲಾದರೂ ವೈರಸ್ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರನ್ನು ಆಗ್ರಹಿಸಿದ್ದಾರೆ.