ನಿಥಾರಿ ಹತ್ಯಾಕಾಂಡ | ಪೋಲಿಸರು ಬಲವಂತದಿಂದ ಸುರೇಂದ್ರ ಕೋಲಿಯ ತಪ್ಪೊಪ್ಪಿಗೆಯನ್ನು ಪಡೆದಿದ್ದರು ಎಂದ ಸುಪ್ರೀಂ ಕೋರ್ಟ್

ಸುರೇಂದ್ರ ಕೋಲಿ |Photo Credit : indiatoday.in
ಹೊಸದಿಲ್ಲಿ,ನ,12: ನಿಥಾರಿ ಹತ್ಯಾಕಾಂಡದಲ್ಲಿ ಪೋಲಿಸರ ತನಿಖೆಯನ್ನು ತೀವ್ರವಾಗಿ ಟೀಕಿಸಿರುವ ಸರ್ವೋಚ್ಚ ನ್ಯಾಯಾಲಯವು, ಸುರೇಂದ್ರ ಕೋಲಿ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳು ವಿಧಿವಿಜ್ಞಾನ ಪುರಾವೆಗಳಿಂದ ಬೆಂಬಲಿತವಾಗಿರಲಿಲ್ಲ ಮತ್ತು ಅಂಗಾಂಗ ಮಾರಾಟಕ್ಕೆ ಸಂಬಂಧಿಸಿದ ಸುಳಿವುಗಳು ಸೇರಿದಂತೆ ಪ್ರಮುಖ ತನಿಖಾ ಮಾರ್ಗಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಬೆಟ್ಟು ಮಾಡಿದೆ. ಕೋಲಿ ಕಾನೂನು ನೆರವು ಅಥವಾ ವೈದ್ಯಕೀಯ ತಪಾಸಣೆಯಿಂದ ವಂಚಿತನಾಗಿ 60 ದಿನಗಳಿಗೂ ಅಧಿಕ ಸಮಯ ಕಸ್ಟಡಿಯಲ್ಲಿದ್ದರಿಂದ ಆತ ನೀಡಿದ್ದ ಎನ್ನಲಾಗಿರುವ ತಪ್ಪೊಪ್ಪಿಗೆಯು ವಿಶ್ವಾಸಾರ್ಹವಲ್ಲ ಎಂದೂ ನ್ಯಾಯಾಲಯವು ಹೇಳಿದೆ.
ಕೋಲಿಯ ತಪ್ಪೊಪ್ಪಿಗೆಯನ್ನು ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಧೀಶರು ಕಸ್ಟಡಿಯಲ್ಲಿ ಹೀಗೆಯೇ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಬೇಕು ಎಂಬ ಬೋಧನೆ ಮತ್ತು ಚಿತ್ರಹಿಂಸೆಯ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ವಿಕ್ರಮನಾಥ ಅವರ ಪೀಠವು 2006ರಿಂದಲೂ ಜೈಲಿನಲ್ಲಿರುವ ಕೋಲಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮಂಗಳವಾರ ಆದೇಶಿಸಿತು.
ಅಪರಾಧ ಸ್ಥಳವನ್ನು ಸುರಕ್ಷಿತವಾಗಿರಿಸುವಲ್ಲಿ ವಿಳಂಬ, ರಿಮಾಂಡ್ ಮತ್ತು ಮಹಜರು ವರದಿಗಳಲ್ಲಿ ವಿರೋಧಾಭಾಸ, ಸಕಾಲಿಕ ವೈದ್ಯಕೀಯ ತಪಾಸಣೆಗಳನ್ನು ನಡೆಸದಿರುವುದು ಮತ್ತು ಅಪೂರ್ಣ ವಿಧಿವಿಜ್ಞಾನ ದಾಖಲಾತಿ ಸೇರಿದಂತೆ ಹಲವಾರು ಲೋಪಗಳನ್ನು ನ್ಯಾಯಾಲಯವು ಎತ್ತಿ ತೋರಿಸಿತು.
ಪೋಲಿಸ್ ತನಿಖೆಯಲ್ಲಿಯ ವ್ಯತ್ಯಾಸಗಳನ್ನೂ ಎತ್ತಿ ತೋರಿಸಿದ ಸರ್ವೋಚ್ಚ ನ್ಯಾಯಾಲಯವು, ಪುರಾವೆಗಳು ಯಾವುದೇ ವೈದ್ಯಕೀಯ ತರಬೇತಿ ಇಲ್ಲದ ಅರೆ-ಶಿಕ್ಷಿತ ಮನೆಗೆಲಸದಾಳು ಮೃತದೇಹಗಳನ್ನು ಹೇಗೆ ನಿಖರವಾಗಿ ಛೇದಿಸಿದ್ದ ಎನ್ನುವುದನ್ನು ವಿವರಿಸುವುದಿಲ್ಲ,ಅಪರಾಧ ನಡೆದಿದ್ದ ಮನೆಯ ಹೊರಗೆ ಪತ್ತೆಯಾಗಿದ್ದ ಚೂರಿಗಳು, ಕೊಡಲಿಗಳು ಮತ್ತು ಮಾನವ ಅವಶೇಷಗಳು ಕೋಲಿಯೊಂದಿಗೆ ಯಾವುದೇ ಸ್ವೀಕಾರಾರ್ಹ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿಸಿತು.
ಮನೆಯಲ್ಲಿಯ ಮತ್ತು ನೆರೆಕರೆಯ ಪ್ರಮುಖ ಸಾಕ್ಷಿಗಳನ್ನು ಪ್ರಶ್ನಿಸುವಲ್ಲಿ ಅಥವಾ ಭೌತಿಕ ಸಾಕ್ಷ್ಯಾಧಾರಗಳನ್ನು ಅನುಸರಿಸಿ ತನಿಖೆ ನಡೆಸುವಲ್ಲಿಯೂ ಪೋಲಿಸರ ವೈಫಲ್ಯವನ್ನು ನ್ಯಾಯಾಲಯವು ಬೆಟ್ಟು ಮಾಡಿತು. ವಿಧಿವಿಜ್ಞಾನ ವಿಶ್ಲೇಷಣೆಯಲ್ಲಿ ಆರೋಪಿತ ಅಪರಾಧಗಳಿಗೆ ಸಂಬಂಧಿಸಿದ ಯಾವುದೇ ಮಾನವ ರಕ್ತದ ಕಲೆಗಳನ್ನು ಅಥವಾ ಅವಶೇಷಗಳು ಮನೆ ನಂ.ಡಿ-5ರಲ್ಲಿ ಕಂಡು ಬಂದಿರಲಿಲ್ಲ.
ಅಲಹಾಬಾದ್ ಉಚ್ಚ ನ್ಯಾಯಾಲಯದ ಹಿಂದಿನ ಖುಲಾಸೆಗಳನ್ನು ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು, ವಿಶೇಷವಾಗಿ ಇತರ ಸಂಬಂಧಿತ ಪ್ರಕರಣಗಳಲ್ಲಿ ಕೋಲಿ ಖುಲಾಸೆಗೊಂಡಿರುವಾಗ ಕೇವಲ ಅನುಮಾನದ ಆಧಾರದಲ್ಲಿ ದೋಷ ನಿರ್ಣಯವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಸಂತ್ರಸ್ತರ ಕುಟುಂಬಗಳ ನೋವಿಗೆ ವಿಷಾದವನ್ನೂ ವ್ಯಕ್ತಪಡಿಸಿದ ಪೀಠವು, ಆದರೆ ಕ್ರಿಮಿನಲ್ ಕಾನೂನಿಗೆ ಶಂಕಾತೀತ ಪುರಾವೆಗಳು ಬೇಕಾಗುತ್ತವೆ ಎಂದು ಹೇಳಿತು.
ನಿಥಾರಿ ಹತ್ಯೆಗಳು ಅತ್ಯಂತ ಘೋರ ಎಂದು ತನ್ನ ತೀರ್ಪಿನಲ್ಲಿ ಬಣ್ಣಿಸಿದ ಪೀಠವು, ಸುದೀರ್ಘ ತನಿಖೆಯ ಹೊರತಾಗಿಯೂ ಅಪರಾಧಿಯ ಗುರುತನ್ನು ಕಾನೂನುಬದ್ಧವಾಗಿ ಸಾಬೀತುಗೊಳಿಸಲು ಸಾಧ್ಯವಾಗದ್ದಕ್ಕಾಗಿ ವಿಷಾದವನ್ನು ವ್ಯಕ್ತಪಡಿಸಿತು.
ನಿಥಾರಿ ಪ್ರಕರಣವು ದೇಶವನ್ನೇ ಬೆಚ್ಚಿ ಬೀಳಿಸಿತ್ತು. 2005ರಲ್ಲಿ ಪ್ರದೇಶದಲ್ಲಿಯ ಹಲವಾರು ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿದ್ದಾರೆ ಎಂದು ಸ್ಥಳೀಯರು ವರದಿ ಮಾಡಿದ್ದರು ಮತ್ತು ಡಿಸೆಂಬರ್ 2006ರಲ್ಲಿ ಮನೆ ನಂ. ಡಿ-5 ಮತ್ತು ಡಿ-6ರ ಬಳಿ ಮಾನವ ಅವಶೇಷಗಳು ಪತ್ತೆಯಾಗಿದ್ದು, ನೊಯ್ಡಾ ಪೋಲಿಸರು ಮಣಿಂದರ್ ಸಿಂಗ್ ಪಂಧೇರ್ ಮತ್ತು ಅತನ ಮನೆಗೆಲಸದಾಳು ಕೋಲಿಯನ್ನು ಬಂಧಿಸಿದ್ದರು.
ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಹಲವಾರು ಎಫ್ಐಆರ್ಗಳು ದಾಖಲಾಗಿದ್ದು,2007ರಲ್ಲಿ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. 14ರ ಹರೆಯದ ರಿಂಪಾ ಹಾಲ್ದರ್ ಮೇಲೆ ತಾನು ಅತ್ಯಾಚಾರ ನಡೆಸಿದ್ದೆ ಮತ್ತು ಹತ್ಯೆಯನ್ನು ಮಾಡಿದ್ದೆ ಎಂಬ ಕೋಲಿ ತಪ್ಪೊಪ್ಪಿಗೆಯು ಹಲವಾರು ದೋಷನಿರ್ಣಯಗಳಿಗೆ ಆಧಾರವಾಗಿತ್ತು.
2012ರಲ್ಲಿ ಹಲವಾರು ಪ್ರಕರಣಗಳಲ್ಲಿ ಕೋಲಿಗೆ ಮರಣದಂಡನೆ ವಿಧಿಸಲಾಗಿತ್ತು. 2015ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಶಿಕ್ಷೆಗಳನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿತ್ತು. 2019ರ ವೇಳೆಗೆ ಕೋಲಿ ಹಲವಾರು ಇತರ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ. ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಕೋಲಿ ವಿರುದ್ಧ ಬಾಕಿಯಿದ್ದ ಕೊನೆಯ ಪ್ರಕರಣದಲ್ಲಿಯೂ ಆತನನ್ನು ಖುಲಾಸೆಗೊಳಿಸಿದೆ.







