ನಮಗೆ ನ್ಯಾಯ ನಿರಾಕರಿಸಲಾಗಿದೆ: ನಿಥಾರಿ ಹತ್ಯಾಕಾಂಡದ ಪ್ರಮುಖ ಆರೋಪಿಗಳ ಖುಲಾಸೆಗೆ ಸಂತ್ರಸ್ತ ಕುಟುಂಬಗಳ ಆಕ್ರೋಶ

ಆರೋಪಿಗಳಾದ ಸುರೀಂದರ್ ಮತ್ತು ಮೊನಿಂದರ್ ಸಿಂಗ್ (File Photo: PTI)
ಹೊಸದಿಲ್ಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಇಬ್ಬರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು, ಸಂತ್ರಸ್ತರ ಕುಟುಂಬಗಳನ್ನು ಆಕ್ರೋಶಕ್ಕೀಡು ಮಾಡಿದೆ.
ಮೊನಿಂದರ್ ಸಿಂಗ್ ಪಂಧೇರ್ ಮತ್ತಾತನ ಉದ್ಯೋಗಿ ಸುರೇಂದ್ರ ಕೊಹ್ಲಿಯನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿರುವುದರಿಂದ ನಮಗೆ ನ್ಯಾಯ ನಿರಾಕರಿಸಲಾಗಿದೆ ಎಂದು ಸಂತ್ರಸ್ತರ ಕುಟುಂಬಗಳು ಆರೋಪಿಸಿವೆ.
ಸೋಮವಾರದ ಕೋರ್ಟ್ ತೀರ್ಪು, ತನ್ನ ಮೂರು ವರ್ಷ ಪ್ರಾಯದ ಮಗನನ್ನು ಕಳೆದುಕೊಂಡ ಕಾರ್ಮಿಕ ರಾಮ್ ಕಿಶನ್ ಆರೋಪಿ ಪಂಧೇರ್ ಬಂಗಲೆಯತ್ತ ಇಟ್ಟಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗಳನ್ನು ಕಳೆದುಕೊಂಡಿರುವ ಝಬ್ಬು ಲಾಲ್ (63) ಮತ್ತು ಸುನೀತಾ ದೇವಿ (60) ಕೂಡ ಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. “ಅನೇಕ ಮಕ್ಕಳನ್ನು ಹತ್ಯೆಗೈದವರನ್ನು ದೋಷಮುಕ್ತಗೊಳಿಸಿದರೆ ಒಂದಿಬ್ಬರನ್ನು ಸಾಯಿಸಿದವರಿಗೆ ಯಾವ ಶಿಕ್ಷೆ ದೊರೆಯಬಹುದೆಂದು ಊಹಿಸಿ,” ಎಂದು ಅವರು ಹೇಳುತ್ತಾರೆ.
ಬಟ್ಟೆಗಳಿಗೆ ಇಸ್ತ್ರಿ ಹಾಕಿ ತಮ್ಮ ಜೀವನ ಸಾಗಿಸುತ್ತಿದ್ದಾರೆ ಈ ದಂಪತಿ. ನ್ಯಾಯಕ್ಕಾಗಿ ಅಲೆದಾಡಿ ವಕೀಲರ ಶುಲ್ಕಕ್ಕಾಗಿ ಸುಮಾರು ರೂ 4 ಲಕ್ಷ ಖರ್ಚು ಮಾಡಿ ತಮಗಿದ್ದ ಜಮೀನು ಕೂಡ ಮಾರಾಟ ಮಾಡಿದ್ದಾಗಿ ಈ ದಂಪತಿ ಹೇಳುತ್ತಾರೆ. “ನಮ್ಮ ಮಕ್ಕಳ ಹಂತಕರನ್ನು ಗಲ್ಲಿಗೇರಿಸಬೇಕು ಎಂದು ಪ್ರಧಾನಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಕೋರುತ್ತೇವೆ,” ಎಂದು ಸುನೀತಾ ದೇವಿ ಹೇಳುತ್ತಾರೆ.
“ರಾಕ್ಷಸರನ್ನು ದೋಷಮುಕ್ತಗೊಳಿಸುವ ಯಾವ ರೀತಿಯ ಕಾನೂನಿದು?” ಎಂದೂ ಆಕೆ ಪ್ರಶ್ನಸುತ್ತಾರೆ.
ನಿಥಾರಿ ಗ್ರಾಮದಲ್ಲಿ ಈಗ ಪಾದರಕ್ಷೆಗ:ಳ ಮಳಿಗೆ ನಡೆಸುವ ಅಶೋಕ್ ಮತ್ತು ರಾಜ್ವತಿ ಕಡ ತಮ್ಮ ಐದು ವರ್ಷದ ಮಗನನ್ನು ಕಳೆದುಕೊಂಡಿದ್ದಾರೆ.
“ಮದುವೆಯಾಗಿ ಎಂಟು ವರ್ಷದ ನಂತರ ಹುಟ್ಟಿದ ಮಗನನ್ನು ಕಳೆದುಕೊಂಡಿದ್ದೇವೆ. ಘಟನೆ ನಡೆದು 17 ವರ್ಷಗಳಾಗಿವೆ, ನ್ಯಾಯ ದೊರೆಯುವ ಎಲ್ಲಾ ಭರವಸೆ ಕಳೆದುಕೊಂಡಿದ್ದೇವೆ,” ಎಂದು ರಾಜ್ವತಿ ಹೇಳುತ್ತಾರೆ.
ಸಂತ್ರಸ್ತ ಕುಟುಂಬಗಳ ಪೈಕಿ ಕೇವಲ ಮೂರು ಕುಟುಂಬಗಳು ಈಗ ನಿಥಾರಿಯಲ್ಲಿ ವಾಸಿಸುತ್ತಿವೆ. ಪಂಧೇರ್ ಮನೆಯಲ್ಲಿ ಹತ್ಯೆಗ ಬಳಸಲಾದ ಆಯುಧಗಳು ಮತ್ತು ರಕ್ತದ ಕಲೆಗಳಿದ್ದವು ಎಂದು ಈ ಪ್ರಕರಣದ ಸಾಕ್ಷಿಯಾಗಿರುವ ಸತೀಶ್ ಚಂದ್ರ ಮಿಶ್ರ ಹೇಳುತ್ತಾರೆ. ಘಟನೆ ನಡೆದ ಸಂದರ್ಭ ಅವರು ಸೆಕ್ಟರ್ 31 ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷರಾಗಿದ್ದರು.







