ಇನ್ನೆರಡು ವರ್ಷಗಳಲ್ಲಿ ಭಾರತದ ರಸ್ತೆಗಳನ್ನು ಅಮೆರಿಕದ ರಸ್ತೆಗಳಿಗೆ ಹೋಲಿಕೆ ಮಾಡಬಹುದು: ನಿತಿನ್ ಗಡ್ಕರಿ

ನಿತಿನ್ ಗಡ್ಕರಿ | PC : PTI
ಹೊಸ ದಿಲ್ಲಿ: ಇನ್ನೆರಡು ವರ್ಷಗಳಲ್ಲಿ ಭಾರತೀಯ ರಸ್ತೆಗಳ ಮೂಲಸೌಕರ್ಯಗಳನ್ನು ಅಮೆರಿಕ ರಸ್ತೆಗಳೊಂದಿಗೆ ಹೋಲಿಕೆ ಮಾಡಬಹುದಾಗಿದೆ ಎಂದು ಸೋಮವಾರ ಅಭಿಪ್ರಾಯ ಪಟ್ಟ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕಳೆದ ಒಂದು ದಶಕದಲ್ಲಿ ರಸ್ತೆಗಳು ಹಾಗೂ ಹೆದ್ದಾರಿ ಮೇಲಿನ ಹೂಡಿಕೆಯನ್ನು ನಮ್ಮ ಸರಕಾರ ತ್ವರಿತಗೊಳಿಸಿದೆ ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.
ಈ ಕುರಿತು ANI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ನಿತಿನ್ ಗಡ್ಕರಿ, “ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು ಕ್ಷಿಪ್ರ ಗತಿಯಲ್ಲಿ ಪ್ರಗತಿಯಲ್ಲಿವೆ. ಮುಂದಿನ ಇನ್ನೆರಡು ವರ್ಷಗಳಲ್ಲಿ ಭಾರತೀಯ ರಸ್ತೆಗಳ ಮೂಲಸೌಕರ್ಯಗಳು ಅಮೆರಿದಂತಿರುವುದನ್ನು ನೀವು ನೋಡಲು ಸಾಧ್ಯವಾಗಲಿದೆ” ಎಂದು ಭಾರತೀಯ ರಸ್ತೆಗಳ ಚಹರೆ ಯಾವಾಗ ಸಂಪೂರ್ಣವಾಗಿ ಬದಲಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
“ನನ್ನನ್ನು ಭೇಟಿಯಾದ ಅಮೆರಿಕದ ಕೆಲವರು, ನಮ್ಮ ಮೂಲಸೌಕರ್ಯಗಳು ಅಮೆರಿಕಕ್ಕಿಂತ ಉತ್ತಮವಾಗಿವೆ ಎಂದು ನನಗೆ ಹೇಳಿದರು” ಎಂದೂ ಅವರು ಹೇಳಿದ್ದಾರೆ.
“ನಮ್ಮ ಸರಕಾರ ನಿರ್ಮಿಸಿರುವ ಉತ್ತಮ ರಸ್ತೆಗಳು ಭಾರತದಲ್ಲಿನ ಸರಕು ಸಾಗಣೆ ವೆಚ್ಚವನ್ನು ತಗ್ಗಿಸಿದ್ದು, ಇದರಿಂದಾಗಿ ರಫ್ತು ಸ್ಪರ್ಧಾತ್ಮಕತೆ ಮತ್ತಷ್ಟು ಸುಧಾರಿಸಲಿದೆ” ಎಂದು ಅವರು ತಿಳಿಸಿದ್ದಾರೆ.
“ನಾವು ನಮ್ಮ ರಫ್ತು ಪ್ರಮಾಣವನ್ನು ಏರಿಕೆ ಮಾಡಲು ಸಾಧ್ಯವಾದರೆ, ಅದರಿಂದಾಗಿ ನಮ್ಮ ಕೃಷಿ ವಲಯ, ಉತ್ಪಾದನಾ ವಲಯ, ಸೇವಾ ವಲಯ ಹಾಗೂ ಇನ್ನಿತರ ವಲಯಗಳು ಸುಧಾರಿಸಲಿವೆ” ಎಂದು ಅವರು ಪ್ರತಿಪಾದಿಸಿದ್ದಾರೆ.