ಉಪಗ್ರಹ ಆಧಾರಿತ ಮುಕ್ತ ಸಂಚಾರ ಟೋಲ್ ವ್ಯವಸ್ಥೆ 2026ರಲ್ಲಿ ಪೂರ್ಣ: ರಾಜ್ಯಸಭೆಗೆ ನಿತಿನ್ ಗಡ್ಕರಿ ಮಾಹಿತಿ

ನಿತಿನ್ ಗಡ್ಕರಿ | Photo Credit : PTI
ಹೊಸದಿಲ್ಲಿ, ಡಿ. 17: ವಾಹನಗಳ ಮುಕ್ತ ಸಂಚಾರ ಟೋಲ್ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ ಹೆದ್ದಾರಿ ನಿರ್ವಹಣೆ ಜಾರಿಯನ್ನು ದೇಶಾದ್ಯಂತ 2026ರ ಕೊನೆಯ ವೇಳೆಗೆ ಪೂರ್ಣಗೊಳಿಸಲಾಗುವುದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ತಿಳಿಸಿದರು.
ಈ ವ್ಯವಸ್ಥೆಯ ಜಾರಿ ಬಳಿಕ, ಪ್ರಯಾಣಿಕರು ಟೋಲ್ ಕೇಂದ್ರಗಳಲ್ಲಿ ಕಾಯುವ ಸಮಯದಲ್ಲಿ ಗಣನೀಯ ಕಡಿತವಾಗುತ್ತದೆ ಎಂದು ಅವರು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ, ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ, ನೂತನ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಆಧಾರಿತವಾಗಿದೆ ಎಂದು ಹೇಳಿದರು. ಇನ್ನು ಮುಂದೆ ಪ್ರಯಾಣಿಕರು ಟೋಲ್ ಕೇಂದ್ರಗಳಲ್ಲಿ ಕಾಯಬೇಕಾಗಿಲ್ಲ ಎಂದು ಹೇಳಿದ ಅವರು, ಇದರಿಂದ 1,500 ಕೋಟಿ ರೂಪಾಯಿ ಬೆಲೆಯ ಇಂಧನ ಉಳಿಯುತ್ತದೆ ಮತ್ತು ಸರಕಾರಕ್ಕೆ 6,000 ಕೋಟಿ ರೂ. ಆದಾಯ ಬರುತ್ತದೆ ಎಂದರು.
‘‘‘ಮಲ್ಟಿ-ಲೇನ್ ಫ್ರೀ ಫ್ಲೋ ಟೋಲ್’ ಅತ್ಯುತ್ತಮ ವ್ಯವಸ್ಥೆಯಾಗಿದೆ. ಮೊದಲು ನಾವು ಟೋಲ್ ಕೇಂದ್ರಗಳಲ್ಲಿ ಹಣ ಪಾವತಿಸಬೇಕಾಗುತ್ತಿತ್ತು. ಅದಕ್ಕೆ 3ರಿಂದ 10 ನಿಮಿಷ ಬೇಕಾಗುತ್ತಿತ್ತು. ನಂತರ ಬಂದ ಫಾಸ್ಟ್ ಟ್ಯಾಗ್ ನಿಂದಾಗಿ, ಈ ಸಮಯವು ಒಂದು ನಿಮಿಷಕ್ಕಿಂತಲೂ ಕಡಿಮೆಯಾಯಿತು. ನಮ್ಮ ಆದಾಯವು ಕನಿಷ್ಠ 5,000 ಕೋಟಿ ರೂಪಾಯಿಯಷ್ಟು ಹೆಚ್ಚಾಯಿತು. ಈಗ ಫಾಸ್ಟ್ಟ್ಯಾಗ್ ಸ್ಥಾನದಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ಬಂದ ಮೇಲೆ, ಈಗ ಕಾರುಗಳು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಟೋಲ್ ಕೇಂದ್ರಗಳನ್ನು ದಾಟಬಹುದಾಗಿದೆ ಮತ್ತು ಕೇಂದ್ರದಲ್ಲಿ ಯಾರನ್ನೂ ನಿಲ್ಲಿಸಲಾಗುವುದಿಲ್ಲ’’ ಎಂದು ಅವರು ರಾಜ್ಯಸಭೆಯಲ್ಲಿ ತಿಳಿಸಿದರು.
‘‘ಟೋಲ್ ಕೇಂದ್ರಗಳಲ್ಲಿ ಕಾಲ ನಷ್ಟವಾಗುವುದನ್ನು ತಪ್ಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿ ಕೃತಕ ಬುದ್ಧಿಮತ್ತೆ ಮತ್ತು ಫಾಸ್ಟ್ ಟ್ಯಾಗ್ ಜೊತೆಗೆ ಉಪಗ್ರಹ ಮೂಲಕ ವಾಹನಗಳ ಸಂಖ್ಯಾ ಫಲಕವನ್ನು ಗುರುತಿಸಲಾಗುತ್ತದೆ’’ ಎಂದರು.
‘‘2026ರ ಕೊನೆಯ ವೇಳೆಗೆ, ನಾವು ನೂತನ ವ್ಯವಸ್ಥೆಯನ್ನು 100 ಶೇಕಡ ಜಾರಿಗೊಳಿಸುತ್ತೇವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ನಾವು 1,500 ಕೋಟಿ ರೂ. ಬೆಲೆಯ ಇಂಧನ ಉಳಿಸುತ್ತೇವೆ ಮತ್ತು 6,000 ಕೋಟಿ ರೂ. ಆದಾಯ ಗಳಿಸುತ್ತೇವೆ. ಜೊತೆಗೆ ಟೋಲ್ ಕಳ್ಳತನ ಕೊನೆಯಾಗುತ್ತದೆ. ಏನೂ ಸಮಸ್ಯೆ ಇರುವುದಿಲ್ಲ. ಜನರು ಟೋಲ್ ಕೇಂದ್ರಗಳಲ್ಲಿ ನಿಲ್ಲಬೇಕಾಗಿಲ್ಲ’’ ಎಂದು ಗಡ್ಕರಿ ನುಡಿದರು.







