ಬಲಾಢ್ಯ ದೇಶಗಳ ದಾದಾಗಿರಿ: ಅಮೆರಿಕ ಜತೆಗಿನ ವ್ಯಾಪಾರ ಸಂಘರ್ಷದ ಬಗ್ಗೆ ನಿತಿನ್ ಗಡ್ಕರಿ ಕಿಡಿ

Photo Credit: PTI
ಹೊಸದಿಲ್ಲಿ: ಇಂದಿನ ಜಗತ್ತಿನಲ್ಲಿ ಆರ್ಥಿಕವಾಗಿ ಪ್ರಬಲವಾಗಿರುವ ಮತ್ತು ತಂತ್ರಜ್ಞಾನವನ್ನು ಹೊಂದಿದ ದೇಶಗಳು ದಾದಾಗಿರಿ ನಡೆಸುತ್ತಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಪಾದಿಸಿದ್ದಾರೆ.
ನಾಗ್ಪುರದ ವಿಶ್ವೇಶ್ವರಯ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಎನ್ಐಟಿ)ಯಲ್ಲಿ ಉಪನ್ಯಾಸ ನೀಡುವ ವೇಳೆ ಗಡ್ಕರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತ ರಫ್ತನ್ನು ಹೆಚ್ಚಿಸಿ ಆಮದು ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
"ನಾವು ನಮ್ಮ ರಫ್ತು ಪ್ರಮಾಣವನ್ನು ಹೆಚ್ಚಿಸಿದರೆ ಮತ್ತು ಆರ್ಥಿಕತೆ ಎತ್ತರಿಸಿದರೆ, ನಾವು ಯಾರ ಬಳಿಯೂ ಹೋಗುವ ಯೋಚನೆ ಮಾಡಬೇಕಿಲ್ಲ. ದಾದಾಗಿರಿಯಲ್ಲಿ ತೊಡಗಿರುವ ದೇಶಗಳು ಆರ್ಥಿಕವಾಗಿ ಪ್ರಬಲವಾಗಿರುವುದರಿಂದ ಮತ್ತು ತಂತ್ರಜ್ಞಾನವನ್ನು ಹೊಂದಿರುವುದರಿಂದ ಹಾಗೆ ಮಾಡುತ್ತಿವೆ. ನಾವು ಒಳ್ಳೆಯ ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ಹೊಂದಿದರೆ, ನಾವು ಯಾರಿಗೂ ಬಗ್ಗಬೇಕಾಗಿಲ್ಲ. ಏಕೆಂದರೆ ನಮ್ಮ ಸಂಸ್ಕೃತಿ ನಮಗೆ ವಿಶ್ವದ ಕಲ್ಯಾಣ ಎಲ್ಲಕ್ಕಿಂತ ಮುಖ್ಯ ಎನ್ನುವುದನ್ನು ಬೋಧಿಸಿದೆ" ಎಂದು ಗಡ್ಕರಿ ವಿಶ್ಲೇಷಿಸಿದರು.
"ಜಗತ್ತು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಎಲ್ಲ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನವೇ ಪರಿಹಾರ. ಅದು ಜ್ಞಾನ. ಜ್ಞಾನವೇ ಶಕ್ತಿ" ಎಂದು ಹೇಳಿದರು.
ಭಾರತ ವಿಶ್ವಗುರುವಾಗಬೇಕಾದರೆ ರಫ್ತು ಹೆಚ್ಚಿಸಿ, ಆಮದು ಕಡಿತಗೊಳಿಸುವುದು ಅನಿವಾರ್ಯ ಎಂದು ಸಚಿವರು ಪ್ರತಿಪಾದಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ವ್ಯಾಪಾರ ಸುಂಕದ ಹಿನ್ನೆಲೆಯಲ್ಲಿ ಗಡ್ಕರಿ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.





