ಬಿಹಾರ | ಚುನಾವಣೆಗೂ ಮುನ್ನ ಸರಣಿ ಯೋಜನೆಗಳನ್ನು ಪ್ರಕಟಿಸಿದ ನಿತೀಶ್ ಕುಮಾರ್ ಸರಕಾರ: ನಕಲು ಎಂದು ಜರಿದ ವಿಪಕ್ಷಗಳು

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರಕಾರ ಸರಣಿ ಯೋಜನೆಗಳನ್ನು ಪ್ರಕಟಿಸಿದೆ. ಈ ಯೋಜನೆಗಳನ್ನು ವ್ಯಂಗ್ಯವಾಡಿರುವ ವಿಪಕ್ಷಗಳು, ನಿತೀಶ್ ಕುಮಾರ್ 20 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ, ಅವರು ಕೇವಲ ಇಂಡಿಯಾ ಮೈತ್ರಿಕೂಟದ ಆಶ್ವಾಸನೆಗಳನ್ನು ನಕಲು ಮಾಡಲು ಮಾತ್ರ ಸಾಧ್ಯವಾಗಿದೆ ಎಂದು ಛೇಡಿಸಿವೆ.
ಗ್ರಾಮೀಣ ಭಾಗಗಳಲ್ಲಿ ಸರಕಾರಿ ಯೋಜನೆಗಳ ಬಗ್ಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರಿಗೆ ಅರಿವು ಮೂಡಿಸಿ, ಅವರನ್ನು ಸರಕಾರಿ ಯೋಜನೆಗಳ ಫಲಾನುಭವಿಯನ್ನಾಗಿಸುವ 10,000ಕ್ಕೂ ಹೆಚ್ಚು ವಿಕಾಸ್ ಮಿತ್ರಾಸ್ ಗಳು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗಲು, ಅವರು ಟ್ಯಾಬ್ಲೆಟ್ ಖರೀದಿಸಲು ಪ್ರತಿಯೊಬ್ಬರಿಗೂ ಒಂದು ಬಾರಿಯ 25,000 ರೂ. ಭತ್ಯೆಯನ್ನು ನೀಡಲಾಗುತ್ತದೆ ಎಂದು ರವಿವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ.
ಇದರೊಂದಿಗೆ ಅವರ ಸಾರಿಗೆ ಭತ್ಯೆಯನ್ನು ಮಾಸಿಕ 1,900 ರೂ.ನಿಂದ 2,500 ರೂ.ಗೆ ಏರಿಕೆ ಮಾಡಲಾಗಿದ್ದು, ಅವರ ಲೇಖನ ಸಾಮಗ್ರಿಗಳ ಭತ್ಯೆಯನ್ನು ಮಾಸಿಕ 900 ರೂ.ನಿಂದ 1,500 ರೂ.ಗೆ ಏರಿಕೆ ಮಾಡಲಾಗಿದೆ.
ಅಧಿಕೃತ ಶಾಲಾ ಶಿಕ್ಷಣಕ್ಕೆ ಮಹಾದಲಿತ, ಅಲ್ಪಸಂಖ್ಯಾತರು ಹಾಗೂ ಅತ್ಯಂತ ಹಿಂದುಳಿದ ಸಮುದಾಯಗಳ ಮಕ್ಕಳನ್ನು ಪರಿಚಯಿಸುವ 30,000ಕ್ಕೂ ಹೆಚ್ಚು ಶಿಕ್ಷಾ ಸೇವಕ್ಸ್ ಹಾಗೂ ತಲಿಮಿ ಮರ್ಕಝ್ ಗಳು ಸ್ಮಾರ್ಟ್ ಫೋನ್ ಖರೀದಿಸಲು ನೆರವಾಗಲು ಪ್ರತಿಯೊಬ್ಬರಿಗೂ ತಲಾ 10,000 ರೂ. ಭತ್ಯೆ ನೀಡುವುದಾಗಿಯೂ ಸರಕಾರ ಘೋಷಿಸಿದೆ.
ಇದಕ್ಕೂ ಮುನ್ನ, ನಿತೀಶ್ ಕುಮಾರ್ ಸರಕಾರ ಜೂನ್ ತಿಂಗಳಲ್ಲಿ ಹಿರಿಯ ನಾಗರಿಕರು, ವಿಧವೆಯರು ಹಾಗೂ ಅಂಗವಿಕಲರ ಮಾಸಿಕ ಪಿಂಚಣಿಯನ್ನು 700 ರೂ.ಗೆ ಏರಿಕೆ ಮಾಡಿತ್ತು. ಇದಲ್ಲದೆ, ಜುಲೈ 11ರಂದು ಆರು ಸಾಮಾಜಿಕ ಭಧ್ರತಾ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಏರಿಕೆ ಮಾಡಲಾಗಿದ್ದ ತಲಾ 1,100 ರೂ. ಪಿಂಚಣಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಇದರ ಒಟ್ಟಾರೆ ಮೊತ್ತ 1.11 ಕೋಟಿ ರೂ. ಆಗಿತ್ತು.







