ಮುಸ್ಲಿಮರ ಟೋಪಿ ಧರಿಸಲು ನಿರಾಕರಿಸಿದ ನಿತೀಶ್ ಕುಮಾರ್

Screengrab : x \ @NEWSDAILY123
ಪಾಟ್ನಾ, ಆ. 21: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಸಮಾರಂಭವೊಂದರಲ್ಲಿ ಮುಸ್ಲಿಮರು ಧರಿಸುವ ಟೋಪಿಯನ್ನು ಧರಿಸಲು ನಿರಾಕರಿಸಿರುವುದಾಗಿ ವರದಿಯಾಗಿದೆ. ಈ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನು ಅನುಸರಿಸಿದ್ದಾರೆ.
ಬಿಹಾರ ರಾಜ್ಯ ಮದರಸ ಶಿಕ್ಷಣ ಮಂಡಳಿಯ ಸಭೆಯೊಂದರಲ್ಲಿ ಭಾಗವಹಿಸಿದ ನಿತೀಶ್ ಕುಮಾರ್ ರಿಗೆ, ಮುಸ್ಲಿಮರು ಸಾಮಾನ್ಯವಾಗಿ ಧರಿಸುವ ಟೋಪಿಯನ್ನು ನೀಡಲಾಯಿತು. ಆದರೆ, ಅವರು ಅದನ್ನು ಸ್ವೀಕರಿಸಲಿಲ್ಲ. ಅವರು ನಗುತ್ತಾ ಎರಡೂ ಕೈಗಳಿಂದ ಟೋಪಿಯನ್ನು ನೀಡಲು ಬಂದವರ ಕೈಗಳನ್ನು ಹಿಂದಕ್ಕೆ ತಳ್ಳಿದರು.
ಆದಾಗ್ಯೂ, ಕೊನೆಗೆ ಮುಖ್ಯಮಂತ್ರಿ ಟೋಪಿಯನ್ನು ತೆಗೆದುಕೊಂಡು ತನ್ನದೇ ಪಕ್ಷದ ನಾಯಕ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಹಮ್ಮದ್ ಝಮ ಖಾನ್ ರ ತಲೆಗೆ ಇಟ್ಟರು.
ಹಿಂದೆ ಹಲವು ಸಂದರ್ಭಗಳಲ್ಲಿ, ಮುಸ್ಲಿಮರ ಕಾರ್ಯಕ್ರಮಗಳಲ್ಲಿ ಅವರು ಇಂಥ ಟೋಪಿಗಳನ್ನು ಧರಿಸಿರುವ ಚಿತ್ರಗಳು ಪ್ರಕಟಗೊಂಡಿವೆ.
ಈ ಘಟನೆಯ ವೀಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಪ್ರಕಟಿಸಿತು. ಆದರೆ, ಬಳಿಕ ಅದನ್ನು ತೆಗೆದುಹಾಕಲಾಯಿತು.
12 ವರ್ಷಗಳ ಹಿಂದೆ, ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ತನಗೆ ನೀಡಲಾದ ಟೋಪಿಯನ್ನು ಧರಿಸಲು ನಿರಾಕರಿಸಿದ್ದರು. ಆಗ ಅದನ್ನು ಟೀಕಿಸಿದ್ದ ನಿತೀಶ್ ಕುಮಾರ್, ಅದು ಮುಸ್ಲಿಮರಿಗೆ ಮಾಡಿದ ಅವಮಾನ ಎಂಬುದಾಗಿ ಬಣ್ಣಿಸಿದ್ದರು.







