ನಿತೀಶ್ ಕುಮಾರ್ ಅಸಹಜವಾಗಿ ವರ್ತಿಸುತ್ತಿದ್ದಾರೆ: ವೀಡಿಯೊ ಹಂಚಿಕೊಂಡ ತೇಜಸ್ವಿ ಯಾದವ್

Photo Credit |X \ @yadavtejashwi
ಪಟ್ನಾ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ತನೆ ಹೊಸ ವಿವಾದಕ್ಕೆ ಕಾರಣವಾಗಿದೆ. ಆರ್ಜೆಡಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಅವರ ಮಾನಸಿಕ ಆರೋಗ್ಯ ಮತ್ತು ಆಡಳಿತ ಸಾಮರ್ಥ್ಯದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.
एक प्रदेश के मुख्यमंत्री को इस दयनीय स्थिति में देख आपको कैसा लग रहा है? क्या अजीब हरकते करते मा॰ मुख्यमंत्री जी आपको मानसिक रूप से स्वस्थ दिखाई दे रहे है?
— Tejashwi Yadav (@yadavtejashwi) October 5, 2025
क्या साजिशन इनकी ऐसी हालत बीजेपी के इशारे पर इनकी ख़ास भूंजा पार्टी ने प्रसाद या अन्य खाद्य पदार्थ खिलाने के बहाने की है?… pic.twitter.com/1JhRwi8DoR
ತೇಜಸ್ವಿ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡು, “ನಿತೀಶ್ ಕುಮಾರ್ ಅವರ ಇಂತಹ ಸ್ಥಿತಿಗೆ ಅವರ ಆಪ್ತ ಸಹಚರರೇ ಕಾರಣವಾಗಿರಬಹುದೇ? ಅಥವಾ ಮೈತ್ರಿಕೂಟದ ಪಾಲುದಾರರಾದ ಬಿಜೆಪಿಯ ಸೂಚನೆಯಂತೆ ಅವರ ಆಹಾರದಲ್ಲಿ ಏನಾದರೂ ಬೆರೆಸಿದರೇ?” ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ, “ಇತ್ತೀಚೆಗೆ ನಿತೀಶ್ ಕುಮಾರ್ ಅವರ ವರ್ತನೆ ಅಸಹಜವಾಗಿದ್ದು, ಅವರು ಸರಿಯಾದ ಮನಸ್ಥಿತಿಯಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ನನ್ನ ತಾಯಿ ರಾಬ್ರಿ ದೇವಿ ಕುರಿತು ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ. ರಾಷ್ಟ್ರಗೀತೆ ವೇಳೆ ತೋರಿದ ಅವರ ಬಾಲಿಶ ನಡವಳಿಕೆ ಈಗಾಗಲೇ ಜನರಿಗೆ ಗೊತ್ತಾಗಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿಯೂ ಅದೇ ರೀತಿಯ ಅಸಮರ್ಪಕ ವರ್ತನೆ ಮರುಕಳಿಸಿತು,” ಎಂದು ಹೇಳಿದರು.
ತೇಜಸ್ವಿ ಯಾದವ್ ಹಂಚಿಕೊಂಡಿರುವ ವೀಡಿಯೊದಲ್ಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಾತನಾಡುತ್ತಿರುವ ಸಮಯದಲ್ಲಿ ನಿತೀಶ್ ಕುಮಾರ್ ತಮ್ಮ ಕಂಪ್ಯೂಟರ್ ಪರದೆಯತ್ತ ಪದೇಪದೇ ಕೈ ಜೋಡಿಸಿ ನಮಸ್ಕಾರ ಮಾಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.







