ಬಿಹಾರ | ನ. 19 ಅಥವಾ 20ಕ್ಕೆ ನಿತೀಶ್ 10ನೇ ಬಾರಿ ಸಿಎಂ ಪ್ರಮಾಣವಚನ ಸಾಧ್ಯತೆ

ನಿತೀಶ್ ಕುಮಾರ್ | Photo Credit : PTI
ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಎಲ್ಲ ವದಂತಿಗಳಿಗೂ ತೆರೆ ಬಿದ್ದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎನ್ಡಿಎ ಮೈತ್ರಿಕೂಟದ ಪ್ರಚಂಡ ಗೆಲುವಿನ ನಂತರ, ನಿತೀಶ್ ಕುಮಾರ್ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಲಭ್ಯತೆಯನ್ನು ಆಧರಿಸಿ, ಬುಧವಾರ ಅಥವಾ ಗುರುವಾರದಂದು ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.
ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತಾರೂಢ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಎನ್ಡಿಎ ಉನ್ನತ ಮೂಲಗಳು ಮಾಹಿತಿ ನೀಡಿವೆ.
“ನಿತೀಶ್ ಕುಮಾರ್ ಹಾಗೂ ಅವರ ಸಂಪುಟದ ಸಚಿವರ ಪ್ರಮಾಣ ವಚನ ಸಮಾರಂಭವು ರಾಜಭವನದಲ್ಲಿ ನಡೆಯುವ ಬದಲು, ಐತಿಹಾಸಿಕ ಗಾಂದಿ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ. ಅಧಿಕಾರ ಹಂಚಿಕೆಯ ಕುರಿತು ದಿಲ್ಲಿಯಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಮಾತುಕತೆ ಪ್ರಗತಿಯಲ್ಲಿದೆ” ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಎನ್ಡಿಎ ಮೈತ್ರಿಕೂಟದ ಎಲ್ಲ ಐದು ಮಿತ್ರ ಪಕ್ಷಗಳಾದ ಜೆಡಿಯು, ಬಿಜೆಪಿ, LJP (R) ಎಚ್ಎಎಂ ಹಾಗೂ RLMನ ಪ್ರತಿನಿಧಿಗಳು ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.







