10,650 ಹೆಚ್ಚುವರಿ ಎಂಬಿಬಿಎಸ್ ಸೀಟ್ಗಳು, 41 ಹೊಸ ಮೆಡಿಕಲ್ ಕಾಲೇಜುಗಳಿಗೆ ಎನ್ಎಂಸಿ ಅನುಮೋದನೆ

AI image
ಹೊಸದಿಲ್ಲಿ,ಅ.19: ರಾಷ್ಟ್ರೀಯ ವೈದ್ಯಕೀಯ ಆಯೋಗವು(ಎನ್ಎಂಸಿ) 2024-25ನೇ ಸಾಲಿಗೆ 10,650 ಹೆಚ್ಚುವರಿ ಎಂಬಿಬಿಎಸ್ ಸೀಟ್ಗಳಿಗೆ ಅನುಮೋದನೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಮುಂದಿನ ಐದು ವರ್ಷಗಳಲ್ಲಿ ಹೊಸದಾಗಿ 75,000 ಮೆಡಿಕಲ್ ಸೀಟ್ಗಳನ್ನು ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದ್ದರು.
41 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೂ ಅನುಮತಿ ನೀಡಲಾಗಿದ್ದು,ಇದರೊಂದಿಗೆ ದೇಶದಲ್ಲಿಯ ಮೆಡಿಕಲ್ ಕಾಲೇಜುಗಳ ಸಂಖ್ಯೆ 816ಕ್ಕೇರಲಿದೆ.
ಪದವಿ ತರಗತಿ(ಯುಜಿ) ಸೀಟ್ಗಳನ್ನು ಹೆಚ್ಚಿಸಲು ಕೋರಿ 41 ಸರಕಾರಿ ಕಾಲೇಜುಗಳು ಮತ್ತು 129 ಖಾಸಗಿ ಸಂಸ್ಥೆಗಳು ಸೇರಿದಂತೆ ಒಟ್ಟು 170 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಹೆಚ್ಚುವರಿಯಾಗಿ ಒಟ್ಟು 10,650 ಮೆಡಿಕಲ್ ಸೀಟ್ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಎನ್ಎಂಸಿ ಮುಖ್ಯಸ್ಥ ಡಾ.ಅಭಿಜಿತ ಶೇಠ್ ಮಾಹಿತಿ ನೀಡಿದರು.
ಇದರಿಂದಾಗಿ 2024-25ನೇ ಸಾಲಿಗೆ ಒಟ್ಟು ಮೆಡಿಕಲ್ ಸೀಟ್ಗಳ ಸಂಖ್ಯೆ 1,37,600ಕ್ಕೇರಲಿದೆ.
ಸ್ನಾತಕೋತ್ತರ (ಪಿಜಿ) ಸೀಟ್ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೋರಿ 3,500ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆಯೋಗವು ಸುಮಾರು 5,000 ಪಿಜಿ ಸೀಟ್ಗಳ ಹೆಚ್ಚಳವನ್ನು ನಿರೀಕ್ಷಿಸಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪಿಜಿ ಸೀಟ್ಗಳ ಸಂಖ್ಯೆ 67,000ಕ್ಕೇರಲಿದೆ. ಯುಜಿ ಮತ್ತು ಪಿಜಿಗಳಲ್ಲಿ ಈ ವರ್ಷ ಒಟ್ಟೂ ಅಂದಾಜು 15,000 ಹೆಚ್ಚುವರಿ ಸೀಟ್ಗಳು ಲಭಿಸಲಿವೆ ಎಂದು ಶೇಠ್ ತಿಳಿಸಿದರು.







