ಲೋಗೋ ಬದಲಾವಣೆ ಮಾಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ; ರಾಷ್ಟ್ರೀಯ ಲಾಂಛನ ಕೈಬಿಟ್ಟು ಧನ್ವಂತರಿಯ ಚಿತ್ರ ಸೇರ್ಪಡೆ
ʼಇಂಡಿಯಾʼ ಪದದ ಬದಲು ʼಭಾರತ್ʼ ಎಂದು ಉಲ್ಲೇಖ

ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಲೋಗೋದಲ್ಲಿ ಮಾರ್ಪಾಟು ತಂದಿದ್ದು ಅದರಲ್ಲಿದ್ದ ರಾಷ್ಟ್ರೀಯ ಲಾಂಛನದ ಚಿತ್ರವನ್ನು ಕೈಬಿಟ್ಟು ವಿಷ್ಣುವಿನ ಅವತಾರವಾಗಿರುವ ಹಾಗೂ ದೇವತೆಗಳ ವೈದ್ಯನೆಂದು ಪುರಾಣಗಳಲ್ಲಿ ಉಲ್ಲೇಖವಿರುವ ಆಯುರ್ವೇದದ ಹರಿಕಾರ ಎಂದು ಕರೆಯಲ್ಪಡುವ ಧನ್ವಂತರಿಯ ಫೋಟೋ ಅನ್ನು ಸೇರಿಸಿದೆ ಎಂದು timesofindia ವರದಿ ಮಾಡಿದೆ.
ಧನ್ವಂತರಿಯ ಲೋಗೋ ಕಳೆದೊಂದು ವರ್ಷದಿಂದ ಬಳಕೆಯಲ್ಲಿತ್ತು, ಈ ಹಿಂದೆ ಅದು ಕಪ್ಪು ಬಿಳುಪು ಇದ್ದುದರಿಂದ ಪ್ರಿಂಟ್‌ಔಟ್‌ಗಳಲ್ಲಿ ಕಾಣಿಸುತ್ತಿರಲಿಲ್ಲ ಎಂದು ಎನ್‌ಎಂಸಿ ಹೇಳಿದೆ. ಈಗ ಲೋಗೋದ ಮಧ್ಯ ಭಾಗದಲ್ಲಿ ಕಲರ್ ಫೋಟೋ ಬಳಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಲಾಂಛನದಲ್ಲೂ ಹಾವು ಸುತ್ತಿಕೊಂಡಿರುವ ಒಂದು ಕೋಲು ಇದೆ. ಇದು ಹಿಂದಿನ ಕಾಲದಿಂದಲೂ ವೈದ್ಯಕೀಯ ವೃತ್ತಿಯ ಚಿಹ್ನೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎನ್‌ಎಂಸಿ ಲೋಗೋದಲ್ಲಿ “ಇಂಡಿಯಾ” ಪದದ ಬಳಕೆಯಿಲ್ಲ ಬದಲು ಭಾರತ್ ಎಂಬ ಉಲ್ಲೇಖವಿದೆ. ಲೋಗೋ ಬದಲಾವಣೆ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕ ಈ ಲೋಗೋದಲ್ಲಿನ ಬದಲಾವಣೆಯನ್ನು ಟೀಕಿಸಿದೆ. ಆಧುನಿಕ ವೈದ್ಯಕೀಯ ವೃತ್ತಿಪರರಿಗೆ ಇದು ಸ್ವೀಕಾರಾರ್ಹವಲ್ಲ. ಇದು ತಪ್ಪು ಸಂದೇಶ ರವಾನಿಸುತ್ತದೆ ಮತ್ತು ಕಮಿಷನ್‌ನ ವೈಜ್ಞಾನಿಕ ಮತ್ತು ಜಾತ್ಯತೀತ ಸ್ವರೂಪಕ್ಕೆ ಹಾನಿಯೆಸಗುತ್ತದೆ, ಬದಲಾವಣೆಯನ್ನು ರದ್ದುಪಡಿಸಬೇಕೆಂದು ಅದು ಕೋರಿದೆ.
ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ ಶರದ್ ಕುಮಾರ್ ಅಗರ್ವಾಲ್ ಪ್ರತಿಕ್ರಿಯಿಸಿ ಈ ವಿಚಾರವನ್ನು ರವಿವಾರ ನಡೆಯುವ ಸಂಘಟನೆಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ಆಯುಷ್ಮಾನ್ ಭಾರತ್ ಹೆಲ್ತ್ ಎಂಡ್ ವೆಲ್‌ನೆಸ್ ಸೆಂಟರ್‌ಗಳು ಇನ್ನು ಆಯುಷ್ಮಾನ್ ಆರೋಗ್ಯ ಮಂದಿರ್ ಎಂದು ಕರೆಯಲ್ಪಡುವುದೆಂದು ಕರೆದ ವಾರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತಗಳಿಗೆ ಪತ್ರ ಬರೆದಿತ್ತು. ರಿಬ್ರ್ಯಾಂಡ್ ಮಾಡಿದ ಹೆಸರುಗಳ ಫೋಟೋ ಅಪ್‌ಲೋಡ್ ಮಾಡುವಂತೆಯೂ ರಾಜ್ಯಗಳಿಗೆ ಸೂಚಿಸಲಾಗಿದೆ. ಹೊಸ ಘೋಷವಾಕ್ಯ “ಆರೋಗ್ಯಂ ಪರಮಮ್ ಧನಮ್” ಎಂಬ ಘೋಷವಾಕ್ಯಗಳನ್ನೂ ಈ ಕೇಂದ್ರಗಳು ಹೊಂದಬೇಕೆಂದು ಸೂಚಿಸಲಾಗಿದೆ.







