ಕರ್ತವ್ಯದಿಂದ ನಿರ್ಗಮನದ ಬಳಿಕ ಕರೆಗಳು, ಇಮೇಲ್ಗಳಿಗೆ ಉತ್ತರಿಸದಿರಲು ಅವಕಾಶ ನೀಡುವ ಸಂಪರ್ಕ ಕಡಿತ ಹಕ್ಕು ಮಸೂದೆ ಲೋಕಸಭೆಯಲ್ಲಿ ಮಂಡನೆ

Photo credit: PTI
ಹೊಸದಿಲ್ಲಿ: ಕಚೇರಿ ಸಮಯದ ಹೊರತಾಗಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಮತ್ತು ಇಮೇಲ್ಗಳಿಗೆ ಉತ್ತರಿಸದಿರಲು ನೌಕರರಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಖಾಸಗಿ ಸದಸ್ಯರ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಸರಕಾರಿ ಶಾಸನದ ಅಗತ್ಯವಿದೆ ಎಂದು ತಾವು ಭಾವಿಸಿರುವ ವಿಷಯಗಳ ಕುರಿತು ಮಸೂದೆಗಳನ್ನು ಮಂಡಿಸಬಹುದು. ಆದಾಗ್ಯೂ,ಹೆಚ್ಚಿನ ಪ್ರಕರಣಗಳಲ್ಲಿ ಪ್ರಸ್ತಾವಿತ ಕಾನೂನಿಗೆ ಸರಕಾರವು ಪ್ರತಿಕ್ರಿಯಿಸಿದ ಬಳಿಕ ಖಾಸಗಿ ಸದಸ್ಯರ ಮಸೂದೆಗಳನ್ನು ಹಿಂದೆಗೆದುಕೊಳ್ಳಲಾಗುತ್ತದೆ.
ಎನ್ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು ಶುಕ್ರವಾರ ಮಂಡಿಸಿದ ‘ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ,2025’ ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರದ ಸ್ಥಾಪನೆಯನ್ನು ಪ್ರಸ್ತಾವಿಸಿದೆ. ಪ್ರತಿ ಉದ್ಯೋಗಿಗೆ ಕಚೇರಿ ಕೆಲಸದ ಅವಧಿಯನ್ನು ಹೊರತುಪಡಿಸಿ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಮತ್ತು ಇಮೇಲ್ಗಳಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ನೀಡಲು ಈ ಮಸೂದೆಯು ಬಯಸಿದೆ.
ಕಾಂಗ್ರೆಸ್ ಸಂಸದೆ ಕೆ.ಕಾವ್ಯಾ ಅವರು ಇನ್ನೊಂದು ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದಾರೆ. ಋತುಸ್ರಾವ ಸೌಲಭ್ಯಗಳ ಮಸೂದೆ,2024 ಮುಟ್ಟಿನ ಸಮಯದಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸೌಲಭ್ಯಗಳು ಮತ್ತು ಬೆಂಬಲವನ್ನು ಒದಗಿಸಲು ಉದ್ದೇಶಿಸಿದೆ. ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಸಂದರ್ಭದಲ್ಲಿ ನಿರ್ದಿಷ್ಟ ಸೌಲಭ್ಯಗಳನ್ನು ಖಚಿತಪಡಿಸಲು ಕಾನೂನು ಚೌಕಟ್ಟೊಂದರ ಸ್ಥಾಪನೆಯನ್ನು ಈ ಮಸೂದೆಯು ಪ್ರಸ್ತಾವಿಸಿದೆ.
ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಅವರು ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯಿತಿ ನೀಡುವ ಮಸೂದೆಯನ್ನು ಮಂಡಿಸಿದರೆ,ಎಲ್ಜೆಪಿ ಸಂಸದೆ ಶಾಂಭವಿ ಚೌಧರಿ ಅವರು ದುಡಿಯುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ವೇತನ ಸಹಿತ ರಜೆ,ಜೊತೆಗೆ ಋತುಸ್ರಾವ ನೈರ್ಮಲ್ಯ ಸೌಲಭ್ಯಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳ ಲಭ್ಯತೆಯನ್ನು ಪ್ರಸ್ತಾವಿಸಿರುವ ಮಸೂದೆಯನ್ನು ಮಂಡಿಸಿದರು.
ಡಿಎಂಕೆ ಸದಸ್ಯೆ ಕನಿಮೋಳಿ ಕರುಣಾನಿಧಿ ಅವರು ಭಾರತದಲ್ಲಿ ಮರಣದಂಡನೆಯನ್ನು ರದ್ದುಗೊಳಿಸುವ ಮಸೂದೆಯನ್ನು ಮತ್ತು ಪಕ್ಷೇತರ ಸಂಸದ ವಿಶಾಲದಾದಾ ಪ್ರಕಾಶ ಬಾಪು ಪಾಟೀಲ್ ಅವರು ಪತ್ರಕರ್ತರ (ಹಿಂಸಾಚಾರ ತಡೆಯುವಿಕೆ ಮತ್ತು ರಕ್ಷಣೆ) ಮಸೂದೆ 2024ನ್ನು ಮಂಡಿಸಿದರು.







