ಖಾಲಿಯಿರುವ ಬೋಧಕ ಹುದ್ದೆಗಳ ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ: ಯುಜಿಸಿ ಅಧ್ಯಕ್ಷರ ಸ್ಪಷ್ಟನೆ
ಹೊಸದಿಲ್ಲಿ, : ನೂತನ ಕರಡು ಮಾರ್ಗಸೂಚಿಗಳಡಿ ಕೇಂದ್ರಿಯ ವಿವಿಗಳಲ್ಲಿ ಮೀಸಲು ಕೋಟಾದಡಿಯ ಖಾಲಿ ಹುದ್ದೆಗಳನ್ನು ಮೀಸಲಾತಿ ಮುಕ್ತಗೊಳಿಸುವುದಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಕೇಂದ್ರೀಯ ವಿವಿಗಳಲ್ಲಿ ಪರಿಶಿಷ್ಟ ಜಾತಿಗಳು,ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗಾಗಿ ಮೀಸಲಾಗಿರುವ ಖಾಲಿ ಹುದ್ದೆಗಳು ಅಂತಿಮ ಮಾರ್ಗಸೂಚಿಗಳ ಭಾಗವಾಗಿರುವುದಿಲ್ಲ ಎಂದು ಅವರು ತಿಳಿಸಿದರು.
ಖಾಲಿಯಿರುವ ಹುದ್ದೆಗಳನ್ನು ಮೀಸಲಾತಿಯಿಂದ ಮುಕ್ತಗೊಳಿಸುವ ಪ್ರಸ್ತಾವವು ದೇಶಾದ್ಯಂತ ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರ ತೀವ್ರ ಟೀಕೆಗಳಿಗೆ ಗುರಿಯಾದ ಬಳಿಕ ಯುಜಿಸಿ ಅಧ್ಯಕ್ಷರ ಈ ಸ್ಪಷ್ಟನೆ ಹೊರಬಿದ್ದಿದೆ.
ಎಸ್ಸಿ,ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾಗಿರುವ ಖಾಲಿ ಹುದ್ದೆಗಳಿಗೆ ಈ ವರ್ಗಗಳ ಸಾಕಷ್ಟು ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಅವುಗಳನ್ನು ಮೀಸಲಾತಿ ಮುಕ್ತ ಎಂದು ಘೋಷಿಸಬಹುದು ಎಂದು ಕರಡು ಮಾರ್ಗಸೂಚಿಗಳಲ್ಲಿ ಪ್ರಸ್ತಾವಿಸಲಾಗಿತ್ತು.
ಅದು ಕೇವಲ ಅಂತಿಮ ಕರಡು ಆಗಿದೆ ಮತ್ತು ಸಾರ್ವಜನಿಕ ಮರುಮಾಹಿತಿಗಳನ್ನು ವಿಶ್ಲೇಷಿಸಿದ ಬಳಿಕ ಅದನ್ನು ಪರಿಷ್ಕರಿಸಿ ಸರಿಪಡಿಸಲಾಗುವುದು ಎಂದೂ ಜಗದೀಶ್ ಕುಮಾರ್ ತಿಳಿಸಿದರು.
ಅಂತಿಮ ಕರಡು ಮಾರ್ಗಸೂಚಿಗಳನ್ನು ಜ.27ರಂದು ಪ್ರಕಟಿಸಿದ್ದ ಸರಕಾರವು,ಸಾರ್ವಜನಿಕರು ಜ.20ರೊಳಗೆ ಸಲಹೆಗಳು ಮತ್ತು ಟೀಕೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು.