ಸರ್ಕಾರದ ನೂತನ 'ವಿಜ್ಞಾನ ಪುರಸ್ಕಾರ' ಪ್ರಶಸ್ತಿಯೊಂದಿಗೆ ನಗದು ಬಹುಮಾನವಿಲ್ಲ
ವಿಜ್ಞಾನಿಗಳಿಗೇಕೆ ನಗದು ಬಹುಮಾನ ಅಗತ್ಯ ಎಂದು ಪ್ರಶ್ನಿಸಿದ CSIR ಮಹಾನಿರ್ದೇಶಕಿ ಕಲೈಸೆಲ್ವಿ

CSIR ಮಹಾನಿರ್ದೇಶಕಿ ಕಲೈಸೆಲ್ವಿ (Credit: www.cecri.res.in)
ಹೊಸದಿಲ್ಲಿ: ಕಳೆದ ವರ್ಷ 300ಕ್ಕೂ ಹೆಚ್ಚು ವಿಜ್ಞಾನ ಪ್ರಶಸ್ತಿಗಳನ್ನು ರದ್ದುಗೊಳಿಸಿದ್ದ ಕೇಂದ್ರ ವಿಜ್ಞಾನ ಸಚಿವಾಲಯವು, ಈ ವರ್ಷ ವಿಜ್ಞಾನಿಗಳನ್ನು ಹುರಿದುಂಬಿಸಲು ನಾಲ್ಕು ಹೊಸ ಪ್ರಶಸ್ತಿಗಳನ್ನು ಪರಿಚಯಿಸಿದೆಯಾದರೂ, ಈ ಯಾವ ಪ್ರಶಸ್ತಿಯೂ ನಗದು ಬಹುಮಾನಗಳನ್ನು ಒಳಗೊಂಡಿಲ್ಲ ಎಂದು theprint.in ವರದಿ ಮಾಡಿದೆ.
ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಯೋಜನೆಯಡಿ ನೀಡಲಾಗುವ ವಿಜ್ಞಾನ ರತ್ನ ವಿಜ್ಞಾನ ಶ್ರೀ, ವಿಜ್ಞಾನ ಯುವ (ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ) ಹಾಗೂ ವಿಜ್ಞಾನ ತಂಡ ಪ್ರಶಸ್ತಿಗಳು ನಗದು ಬಹುಮಾನವನ್ನು ಒಳಗೊಂಡಿಲ್ಲ ಎಂದು ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಮಂಡಳಿಯ (CSIR) ಮಹಾನಿರ್ದೇಶಕಿ ಎನ್.ಕಲೈಸೆಲ್ವಿ ThePrint ಸುದ್ದಿ ಸಂಸ್ಥೆಗೆ ದೃಢಪಡಿಸಿದ್ದಾರೆ.
ಸೋಮವಾರ ಅನುಸಂಧಾನ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಕಲೈಸೆಲ್ವಿ, "ವಿಜ್ಞಾನಿಗಳಿಗೆ ಪದಕ ಮತ್ತು ಸ್ಮರಣಿಕೆಯನ್ನು ನೀಡುವಾಗ ನಗದು ಬಹುಮಾನವೇಕೆ ಬೇಕು?" ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಹಿರಿಯ ಅಧಿಕಾರಿ ಕೂಡಾ ಈ ಸಂಗತಿಯನ್ನು ದೃಢಪಡಿಸಿದ್ದಾರೆ.
ವಿಜ್ಞಾನ ಪ್ರಶಸ್ತಿ ವಿಜೇತರು ಸದ್ಯ ರೂ. 5 ಲಕ್ಷ ನಗದು ಬಹುಮಾನ ಹಾಗೂ ಪ್ರತಿ ತಿಂಗಳು ರೂ. 15,000 ಗೌರವ ಧನವನ್ನು ತಾವು 65 ವರ್ಷ ತಲುಪುವವರೆಗೂ ಪಡೆಯುತ್ತಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ಪ್ರಶಸ್ತಿಗಳಿಗೂ ನಗದು ಬಹುಮಾನವಿಲ್ಲ.







