ವಿಶೇಷ ತೀವ್ರ ನಿಗಾ ಪರಾಮರ್ಶೆ(SIR)ಯಲ್ಲಿ ಯಾವುದೇ ಬದಲಾವಣೆಯಿಲ್ಲ: ಚುನಾವಣಾ ಆಯೋಗ
ಜಾಹೀರಾತಿನಿಂದ ಉಂಟಾದ ಗೊಂದಲಕ್ಕೆ ಆಯೋಗದ ಸ್ಪಷ್ಟೀಕರಣ

Photo Credit: PTI
ಪಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ನಿಗಾ ಪರಾಮರ್ಶೆಯು ತಳಮಟ್ಟದಲ್ಲಿ ಸುಗಮವಾಗಿ ಸಾಗುತ್ತಿದ್ದು, ಈ ಸೂಚನೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರವಿವಾರ ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಬಿಹಾರ ರಾಜ್ಯದ ಮತದಾರರ ಪಟ್ಟಿಯಿಂದ ಅನರ್ಹರ ಹೆಸರುಗಳನ್ನು ತೆಗೆದು ಹಾಕಲು ಹಾಗೂ ಅರ್ಹ ನಾಗರಿಕರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಬಿಹಾರದಲ್ಲಿ ವಿಶೇಷ ತೀವ್ರ ನಿಗಾ ಪರಾಮರ್ಶೆ ನಡೆಸುವಂತೆ ಜೂನ್ 24ರಂದು ಭಾರತೀಯ ಚುನಾವಣಾ ಆಯೋಗ ಸೂಚನೆ ನೀಡಿತ್ತು.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಭಾರತೀಯ ಚುನಾವಣಾ ಆಯೋಗ, “ಮತದಾರರು ಜುಲೈ 25ರೊಳಗೆ ಯಾವುದೇ ಸಮಯದಲ್ಲಾದರೂ ತಮ್ಮದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ಹಾಗೆ ಮಾಡಲು ವಿಫಲರಾದರೆ, ಹಕ್ಕು ಪ್ರತಿಪಾದನೆ ಹಾಗೂ ಆಕ್ಷೇಪಗಳ ಅವಧಿಯಲ್ಲಿ ಅಂಥವರು ಮತ್ತೊಂದು ಅವಕಾಶ ಪಡೆಯಲಿದ್ದಾರೆ” ಎಂದು ಸ್ಪಷ್ಟನೆ ನೀಡಿದೆ.
ಇದೇ ವೇಳೆ, ದಿನಾಂಕ ಜೂನ್ 24, 2025ರಂದು ಬಿಡುಗಡೆ ಮಾಡಲಾಗಿರುವ ವಿಶೇಷ ತೀವ್ರ ನಿಗಾ ಪರಾಮರ್ಶೆ ಆದೇಶವನ್ನು ಓದದೆ ಕೆಲವು ವ್ಯಕ್ತಿಗಳು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಜನರು ಜಾಗೃತರಾಗಿರಬೇಕು ಎಂದೂ ಮನವಿ ಮಾಡಿರುವ ಚುನಾವಣಾ ಆಯೋಗ, ಅಂಥವರು ತಮ್ಮ ತಪ್ಪು ಹಾಗೂ ದಾರಿ ತಪ್ಪಿಸುವ ಹೇಳಿಕೆಗಳಿಂದ ಜನರಲ್ಲಿ ಗೊಂದಲವನ್ನುಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಚ್ಚರಿಸಿದೆ.
“ಇದೀಗ ಕೇವಲ ಅರ್ಜಿಗಳನ್ನು ಮಾತ್ರ ತುಂಬಬೇಕು. ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ” ಎಂಬ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಚುನಾವಣಾ ಆಯೋಗದ ಜಾಹೀರಾತನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ನಂತರ, ಚುನಾವಣಾ ಆಯೋಗದಿಂದ ಈ ಸ್ಪಷ್ಟೀಕರಣ ಹೊರ ಬಿದ್ದಿದೆ.