ಸಂವಿಧಾನದ ಪೀಠಿಕೆಯಿಂದ ʼಜಾತ್ಯತೀತʼ ಹಾಗೂ ʼಸಮಾಜವಾದಿʼ ಪದಗಳನ್ನು ಕೈಬಿಡುವ ಯಾವುದೇ ಯೋಜನೆಯಿಲ್ಲ: ಕೇಂದ್ರ ಸರಕಾರ

ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘ್ವಾಲ್ (Photo: PTI)
ಹೊಸದಿಲ್ಲಿ: ಸದ್ಯ ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಹಾಗೂ ‘ಸಮಾಜವಾದಿ’ ಪದಗಳನ್ನು ಕೈಬಿಡುವ ಬಗ್ಗೆ ಯಾವುದೇ ಪರಿಗಣನೆ ಅಥವಾ ಯೋಜನೆ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಗುರುವಾರ ರಾಜ್ಯಸಭೆಯಲ್ಲಿ ಪ್ರಶ್ನೊಯೊಂದಕ್ಕೆ ಉತ್ತರಿಸಿದ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘ್ವಾಲ್, ‘ಜಾತ್ಯತೀತ’ ಹಾಗೂ ‘ಸಮಾಜವಾದಿ’ ಪದಗಳನ್ನು ಕೈಬಿಡಬೇಕು ಎಂಬ ಚರ್ಚೆಗಳು ಅಥವಾ ಮಾತುಕತೆಗಳು ಕೆಲವು ಸಾರ್ವಜನಿಕ ಅಥವಾ ರಾಜಕೀಯ ವಲಯಗಳಲ್ಲಿ ನಡೆಯುತ್ತಿದ್ದರೂ, ಈ ಬಗ್ಗೆ ಸರಕಾರ ಯಾವುದೇ ಅಧಿಕೃತ ಪ್ರಸ್ತಾವನೆಯನ್ನು ಪ್ರಕಟಿಸಿಲ್ಲ ಅಥವಾ ಸಂವಿಧಾನ ಪೀಠಿಕೆಯನ್ನು ತಿದ್ದುಪಡಿ ಮಾಡಲು ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಸಚಿವ ಅರ್ಜುನ್ ಮೇಘ್ವಾಲ್ , “ಸದ್ಯ ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಕಿತ್ತು ಹಾಕುವ ಅಥವಾ ಕಿತ್ತು ಹಾಕಲು ಪರಿಗಣಿಸುವ ಯಾವುದೇ ಯೋಜನೆ ಅಥವಾ ಉದ್ದೇಶವಿಲ್ಲ ಎಂಬುದು ಸರಕಾರದ ಅಧಿಕೃತ ನಿಲುವಾಗಿದೆ” ಎಂದು ತಿಳಿಸಿದ್ದಾರೆ.
ಸಂವಿಧಾನದ ಪೀಠಿಕೆಗೆ ತಿದ್ದುಪಡಿ ತರಬೇಕಿದ್ದರೆ, ವಿಸ್ತೃತ ಚರ್ಚೆ ಹಾಗೂ ವ್ಯಾಪಕ ಸಹಮತ ಏರ್ಪಡಬೇಕಿದ್ದು, ಸದ್ಯ ಇದು ಸರಕಾರದ ಪರಿಗಣನೆಯಲ್ಲಿಲ್ಲ ಎಂದು ಅವರು ತಮ್ಮ ಉತ್ತರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
1976ರಲ್ಲಿ ‘ಜಾತ್ಯತೀತ’ ಹಾಗೂ ‘ಸಮಾಜವಾದಿ’ ಪದಗಳನ್ನು ಸೇರ್ಪಡೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನವೆಂಬರ್ 2024ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಎಂದೂ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.







