Bihar| ಹಿಜಾಬ್, ಬುರ್ಖಾ, ಮಾಸ್ಕ್ ಧರಿಸಿದವರಿಗೆ ಪ್ರವೇಶವಿಲ್ಲ: ನೋಟಿಸ್ ಹಾಕಿದ ಆಭರಣದ ಅಂಗಡಿಗಳು

ಸಾಂದರ್ಭಿಕ ಚಿತ್ರ (AI)
ಪಾಟ್ನಾ: ಬಿಹಾರದಾದ್ಯಂತ ಆಭರಣದ ಅಂಗಡಿಗಳಲ್ಲಿ ಮುಖ ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಹಿಜಾಬ್, ನಿಖಾಬ್, ಬುರ್ಖಾ, ಮಾಸ್ಕ್, ಹೆಲ್ಮೆಟ್ ಧರಿಸಿದ ಗ್ರಾಹಕರಿಗೆ ಪ್ರವೇಶವಿಲ್ಲ ಎಂದು ನೋಟಿಸ್ ಹಾಕಲಾಗಿದೆ ಎಂದು indiatoday.in ವರದಿ ಮಾಡಿದೆ.
ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಅಖಿಲ ಭಾರತ ಜುವೆಲ್ಲರ್ಸ್ ಮತ್ತು ಗೋಲ್ಡ್ ಫೆಡರೇಷನ್ (AIJGF) ನಿರ್ದೇಶನದ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಜನವರಿ 8ರಿಂದ ಬಿಹಾರ ರಾಜ್ಯಾದ್ಯಂತ ಈ ನಿಯಮ ಜಾರಿಗೆ ಬಂದಿದೆ. ಆಭರಣ ಅಂಗಡಿ ಮಾಲಕರು ಈಗಾಗಲೇ ತಮ್ಮ ಅಂಗಡಿಗಳ ಹೊರಗೆ "ಪ್ರವೇಶವಿಲ್ಲ" ಎಂಬ ಫಲಕಗಳನ್ನು ಹಾಕಿದ್ದಾರೆ. ಬುಧವಾರ ಪಾಟ್ನಾದ ಆಭರಣ ಅಂಗಡಿಗಳ ಹೊರಗೆ ಈ ಕುರಿತ ಪೋಸ್ಟರ್ಗಳು ಕಂಡು ಬಂದಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿರುವಾಗ ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆಗಳು ನಡೆಯುತ್ತಿದೆ. ಈ ನಿರ್ಧಾರವು ಸಂಪೂರ್ಣವಾಗಿ ಆಭರಣದ ಅಂಗಡಿ, ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ವ್ಯಾಪಾರಿಯೋರ್ವರು ಹೇಳಿದ್ದಾರೆ.
ಗ್ರಾಹಕರು ತಮ್ಮ ಮಾಸ್ಕ್ಗಳನ್ನು ತೆರೆದ ನಂತರ ಅವರಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಈ ನಿರ್ಬಂಧ ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.







