ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ: ತನ್ನ ಆದೇಶ ಮಾರ್ಪಾಡು ಮಾಡಿದ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ದಿಲ್ಲಿ-ಎನ್ಸಿಆರ್ ನಲ್ಲಿರುವ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಇಂದು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ಬೀದಿ ನಾಯಿಗಳಿಗೆ ಸಂತಾನಹರಣ ಮಾಡಿದ ನಂತರ, ಅವನ್ನು ಬೀದಿಗಳಿಗೆ ಬಿಡಬಹುದು ಎಂದು ತೀರ್ಪು ನೀಡಿದೆ. ಆದರೆ, ಬೀದಿ ನಾಯಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಉಣಿಸಬಾರದು. ಅವಕ್ಕೆ ಪ್ರತ್ಯೇಕ ವಲಯದಲ್ಲಿ ಮಾತ್ರ ಆಹಾರ ನೀಡಬೇಕು ಎಂದೂ ಆದೇಶಿಸಿದೆ. ಮಹಾನಗರ ಪಾಲಿಕೆ ವಾರ್ಡ್ ಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರದೇಶಗಳನ್ನು ನಿರ್ಮಾಣ ಮಾಡಬೇಕು ಎಂದೂ ಸ್ಥಳೀಯ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸ್ಥಳೀಯ ಸಂಸ್ಥೆಗಳು ಮಹಾನಗರ ಪಾಲಿಕೆ ವಾರ್ಡ್ ಗಳಲ್ಲಿ ನಾಯಿಗಳಿಗೆ ಆಹಾರ ನೀಡುವ ಪ್ರದೇಶವನ್ನು ನಿರ್ಮಾಣ ಮಾಡಬೇಕು. ನಾಯಿಗಳಿಗೆ ಆಹಾರ ನೀಡುವುದಕ್ಕೆ ಅನುಮತಿ ಇದೆ. ಆದರೆ, ನಿಯಮವನ್ನು ಉಲ್ಲಂಘಿಸಿದರೆ, ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ತನ್ನ ಈ ಆದೇಶವನ್ನು ಕೇವಲ ದಿಲ್ಲಿ-ಎನ್ಸಿಆರ್ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸದೆ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸುವ ಮೂಲಕ, ಇಡೀ ದೇಶಕ್ಕೆ ವಿಸ್ತರಿಸಿದೆ.
ಆಗಸ್ಟ್ 8ರ ಆದೇಶವನ್ನು ತುಸು ಮಾರ್ಪಾಡು ಮಾಡಿರುವ ವಿಸ್ತೃತ ನ್ಯಾಯಪೀಠ, ನಾಯಿಗಳಿಗೆ ಲಸಿಕೆ ಹಾಗೂ ಜಂತುಹುಳ ನಿವಾರಣೆ ಮಾಡಿದ ನಂತರ, ಅವರನ್ನು ಈ ಹಿಂದಿನ ಸ್ಥಳಗಳಿಗೇ ಬಿಡಬಹುದು ಎಂದು ಹೇಳಿದೆ. ಆದರೆ, ರೇಬೀಸ್ ಹಾಗೂ ಇನ್ನಿತರ ಆಕ್ರಮಣಕಾರಿ ವರ್ತನೆ ಹೊಂದಿರುವ ನಾಯಿಗಳಿಗೆ ಲಸಿಕೆ ನೀಡಬೇಕು ಹಾಗೂ ಅವರನ್ನು ಪ್ರತ್ಯೇಕ ವಾಸದಲ್ಲಿರಿಸಬೇಕು ಎಂದೂ ನಿರ್ದೇಶನ ನೀಡಿದೆ.
“ಬೀದಿ ನಾಯಿಗಳನ್ನು ಬೀದಿಗೆ ಬಿಡುಗಡೆ ಮಾಡುವುದರ ವಿರುದ್ಧದ ನಿಷೇಧಕ್ಕೆ ತಡೆಯಾಜ್ಞೆ ನೀಡಲಾಗಿದೆ. ಅವನ್ನು ಜಂತು ಹುಳುವಿನಿಂದ ಮುಕ್ತಗೊಳಿಸಬೇಕು, ಅವುಗಳಿಗೆ ಲಸಿಕೆ ಹಾಕಿಸಬೇಕು ಹಾಗೂ ಈ ಹಿಂದಿನ ಸ್ಥಳಕ್ಕೇ ಕಳುಹಿಸಿ ಕೊಡಬೇಕು” ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಾಣಿ ಪ್ರಿಯರು ನಾಯಿಗಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ನಾಯಿಗಳು ಮತ್ತೆ ಬೀದಿಗಳಿಗೆ ಮರಳದಂತೆ ಖಾತರಿಗೊಳಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕರ್ತವ್ಯನಿರತ ಅಧಿಕಾರಿಗಳಿಗೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಅಡ್ಡಿ ಉಂಟು ಮಾಡುವಂತಿಲ್ಲ. ಆಗಸ್ಟ್ 8ರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸರಕಾರೇತರ ಸಂಘಟನೆಗಳು ನ್ಯಾಯಾಲಯದ ರಿಜಿಸ್ಟರ್ ಬಳಿ ಕ್ರಮವಾಗಿ 25,000 ರೂ. ಹಾಗೂ 2 ಲಕ್ಷ ರೂ. ಅನ್ನು ಠೇವಣಿ ಇಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ಇದಕ್ಕೂ ಮುನ್ನ, ಬೀದಿ ನಾಯಿಗಳ ಕುರಿತು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಬೀದಿಯಿಂದ ಕರೆದುಕೊಂಡು ಹೋದ ಯಾವುದೇ ನಾಯಿಯನ್ನೂ ಮತ್ತೆ ಬೀದಿಗೆ ಬಿಡುವಂತಿಲ್ಲ. ಇಲ್ಲವಾದರೆ ಇಡೀ ಪ್ರಯತ್ನವೇ ವಿಫಲವಾಗಲಿದೆ. ಹೀಗೆ ಮಾಡಿರುವುದೇನಾದರೂ ನಮ್ಮ ಗಮನಕ್ಕೆ ಬಂದರೆ, ನಾವು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿತ್ತು.







