ಝುಬೀನ್ ಗರ್ಗ್ ಸಾವು ಪ್ರಕರಣ: ಸಿಂಗಾಪುರ ಪೊಲೀಸರು ಹೇಳಿದ್ದೇನು?

Photo credit: PTI
ಗುವಾಹಟಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಪ್ರಾಥಮಿಕ ತನಿಖೆಯನ್ವಯ ಗಾಯಕ ಝುಬೀನ್ ಗರ್ಗ್ ಸಾವಿನಲ್ಲಿ ಯಾವುದೇ ಪಿತೂರಿ ಕಂಡು ಬಂದಿಲ್ಲ ಎಂದು ಈ ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಸಿಂಗಾಪುರ ಪೊಲೀಸರು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಝುಬೀನ್ ಗರ್ಗ್ ಸಾವು ಪ್ರಕರಣದ ಕುರಿತು ಇದೇ ಪ್ರಥಮ ಬಾರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಿಂಗಾಪುರ ಪೊಲೀಸ್ ಪಡೆ, “ಝುಬೀನ್ ಗರ್ಗ್ ರ ಸಾವಿನ ಸನ್ನಿವೇಶದ ಕುರಿತು ಅಂತರ್ಜಾಲದಲ್ಲಿ ಊಹಾಪೋಹ ಹಾಗೂ ಸುಳ್ಳು ಮಾಹಿತಿಗಳು ಹರಿದಾಡುತ್ತಿರುವುದರ ಅರಿವು ಸಿಂಗಾಪುರ ಪೊಲೀಸ್ ಪಡೆಗೆ ಇದೆ. ಸದ್ಯ ಸಿಂಗಾಪುರದ ತನಿಖಾಧಿಕಾರಿಗಳ ಕಾಯ್ದೆ, 2010ರ ಅನ್ವಯ ಸಿಂಗಾಪುರ ಪೊಲೀಸ್ ಪಡೆ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ, ಝುಬೀನ್ ಗರ್ಗ್ ಸಾವಿನಲ್ಲಿ ಯಾವುದೇ ಪಿತೂರಿಯಿರುವುದು ಕಂಡು ಬಂದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಗಾಯಕ ಝುಬೀನ್ ಗರ್ಗ್ ರ ಕುಟುಂಬ ಹಾಗೂ ಅಭಿಮಾನಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಸ್ಸಾಂನಲ್ಲಿ ತೀವ್ರ ಹೋರಾಟ, ರಾಜಕೀಯ ಜಟಾಪಟಿ ಹಾಗೂ ಆಗ್ರಹಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಈ ಹೇಳಿಕೆ ಹೊರ ಬಿದ್ದಿದೆ.





