ಗುರುಗ್ರಾಮ್: ಮಸೀದಿಗಳಲ್ಲಿ, ತೆರೆದ ಸ್ಥಳಗಳಲ್ಲಿ ಶುಕ್ರವಾರದ ನಮಾಝ್ (ಜುಮಾ) ಸಲ್ಲಿಸದಂತೆ ಮುಸ್ಲಿಂ ಕೌನ್ಸಿಲ್ ಮನವಿ

ಸಾಂದರ್ಭಿಕ ಚಿತ್ರ (PTI)
ಗುರುಗ್ರಾಮ್: ಶುಕ್ರವಾರದ ನಮಾಝ್ (ಜುಮಾ) ಅನ್ನು ಮಸೀದಿಗಳು ಅಥವಾ ತೆರೆದ ಸ್ಥಳಗಳಲ್ಲಿ ಸಲ್ಲಿಸದಂತೆ ಗುರುಗ್ರಾಮದ ಮುಸ್ಲಿಂ ಕೌನ್ಸಿಲ್ ತನ್ನ ಸಮುದಾಯದ ಸದಸ್ಯರಿಗೆ ವಿನಂತಿಸಿದೆ. ನೂಹ್ ಹಿಂಸಾಚಾರ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೇ ಇರಲು ಈ ವಿನಂತಿ ಮಾಡಲಾಗಿದೆ.
ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗುರುಗ್ರಾಮದಾದ್ಯಂತ ಇರುವ ಎಲ್ಲಾ ಮಸೀದಿಗಳಲ್ಲಿ ಭದ್ರತೆಗೆ ಏರ್ಪಾಟು ಮಾಡಿದೆ.
ಗುರುಗ್ರಾಮದಲ್ಲಿ ಹಿಂದೆಯೂ ತೆರೆದ ಸ್ಥಳದಲ್ಲಿ ನಮಾಝ್ ಸಲ್ಲಿಕೆಗೆ ವಿರೋಧವಿತ್ತು. ಈಗ ನೂಹ್ ಹಿಂಸಾಚಾರ ಹಿನ್ನೆಲೆಯಲ್ಲಿ ಇಂದು ಯಾರೂ ತೆರೆದ ಸ್ಥಳಗಳಲ್ಲಿ ನಮಾಝ್ ಸಲ್ಲಿಸದಂತೆ ಕೋರಲಾಗಿದೆ ಎಂದು ಮುಸ್ಲಿಂ ಏಕ್ತಾ ಮಂಚ್ ಅಧ್ಯಕ್ಷ ಹಾಜಿ ಸಜ್ಜದ್ ಖಾನ್ ಹೇಳಿದ್ದಾರೆ
ಗುರುವಾರ ನಗರದ ಮುಸ್ಲಿಂ ಸಮುದಾಯ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರನ್ನು ಭೇಟಿಯಾಗಿ ಮತ್ತೆ ಹಿಂಸಾಚಾರ ನಡೆಯದಂತೆ ಕ್ರಮಕೈಗೊಳ್ಳುವಂತೆ ವಿನಂತಿಸಿದೆ.
ಎಲ್ಲಾ ಮಸೀದಿಗಳಿಗೆ ರಕ್ಷಣೆ ಒದಗಿಸಲಾಗಿದೆ, ಜನರು ಮಸೀದಿಯಲ್ಲಿ ನಮಾಝ್ ಸಲ್ಲಿಸಲು ಬಯಸಿದರೂ ಯಾವುದೇ ಸಮಸ್ಯೆಯಾಗದಂತೆ ನಮಾಝ್ ಸಲ್ಲಿಸಲು ಏರ್ಪಾಟು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





