Uttar Pradesh | ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಅವಸ್ಥಿ

Screengrab: X
ಲಖಿಂಪುರ ಖೇರಿ: ಜಿಲ್ಲೆಯ ಇಸಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯ ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ತಜ್ಞ ವೈದ್ಯರ ಕೊರತೆಯನ್ನು ಬಿಜೆಪಿ ಶಾಸಕ ವಿನೋದ್ ಶಂಕರ್ ಅವಸ್ಥಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಘಟನೆಯ ಬಳಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಜಿಲ್ಲೆಗೆ ಹೃದಯ ತಜ್ಞರನ್ನು ನೇಮಿಸುವಂತೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪದೇ ಪದೇ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ನೇಮಕಾತಿ ನಡೆದಿಲ್ಲ ಎಂದು ಹೇಳಿದರು. ಅವರ ಈ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮಂಗಳವಾರ ಇಸಾನಗರ ಪಿಎಚ್ಸಿಯಲ್ಲಿ ಈ ದುರ್ಘಟನೆ ನಡೆದಿದೆ. ಹೆರಿಗೆಯ ನಂತರ ಚಿಕಿತ್ಸೆಯ ವೇಳೆ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೌಲಭ್ಯಗಳ ಕೊರತೆಯನ್ನು ಆರೋಪಿಸಿ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ಮಾಹಿತಿಯಂತೆ, ಶಿವಪುರ ಗ್ರಾಮದ ನಿವಾಸಿ ರಾಮ್ ಕಿಶುನ್ ತಮ್ಮ 40 ವರ್ಷದ ಪತ್ನಿ ರಾಮಾವತಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದು, ಕರ್ತವ್ಯದಲ್ಲಿದ್ದ ಎಎನ್ಎಂ ಉಷಾ ಹೆರಿಗೆ ನಡೆಸಿದರು. ಮಹಿಳೆ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದರು ಎಂದು ತಿಳಿಸಲಾಗಿದೆ.
ಹೆರಿಗೆಯ ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾದರೂ, ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ನರ್ಸ್ಗಳು ಸಮಯಕ್ಕೆ ಲಭ್ಯವಿರಲಿಲ್ಲ. ಸುಮಾರು ಅರ್ಧ ಗಂಟೆಯ ವಿಳಂಬದ ಬಳಿಕವೇ ಸಿಬ್ಬಂದಿ ಹಾಜರಾದರು ಎಂದು ಕುಟುಂಬ ಆರೋಪಿಸಿದೆ. ಔಷಧಿ ಹಾಗೂ ಇಂಜೆಕ್ಷನ್ ಗಳನ್ನು ಹೊರಗಿನಿಂದ ಖರೀದಿಸುವಂತೆ ಸೂಚಿಸಲಾಗುತ್ತಿತ್ತು ಮತ್ತು ಆಂಬ್ಯುಲೆನ್ಸ್ ಸೇವೆಯೂ ತಡವಾಗಿ ಸ್ಪಂದಿಸಿತು ಎಂಬ ಆರೋಪಗಳೂ ಕೇಳಿಬಂದಿವೆ.
ಪ್ರತಿಭಟನೆಗಳ ಮಾಹಿತಿ ಪಡೆದ ಬಳಿಕ ಇಸಾನಗರ ಪಿಎಚ್ಸಿ ಸೂಪರಿಂಟೆಂಡೆಂಟ್ ಅಮಿತ್ ಸಿಂಗ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಸೇರಿದಂತೆ ನಿರ್ಲಕ್ಷ್ಯಕ್ಕೆ ಕಾರಣರಾದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಶಾಸಕ ವಿನೋದ್ ಶಂಕರ್ ಅವಸ್ಥಿ ಸೂಚನೆ ನೀಡಿದ್ದಾರೆ.
I feel ashamed there is not even one heart specialist in Lakhimpur Kheri. The is such scarcity of doctors: BJP MLA Vinod Shankar Awasthi exposing the healthcare in Uttar Pradesh. pic.twitter.com/LlEIjKxSEJ
— Piyush Rai (@Benarasiyaa) January 7, 2026







