ಸುನೇತ್ರಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನನಗೆ ತಿಳಿದಿಲ್ಲ: ಶರದ್ ಪವಾರ್

Photo| PTI
ಬಾರಾಮತಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವರದಿಗಳ ನಡುವೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ತಿಳಿದಿಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನಮ್ಮ ಜೊತೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಈ ಬಗ್ಗೆ ಪತ್ರಿಕೆ ವರದಿಗಳ ಮೂಲಕವೇ ತಿಳಿದುಕೊಂಡೆ ಎಂದು ಶರದ್ ಪವಾರ್ ಹೇಳಿದ್ದಾರೆ.
“ಅಜಿತ್ ಪವಾರ್ ಅವರ ನಿಧನದ ನಂತರ, ಎನ್ಸಿಪಿ ಸುನೇತ್ರಾ ಪವಾರ್ ಅವರನ್ನು ತಮ್ಮ ಪಕ್ಷದ ನಾಯಕಿಯಾಗಿ ನೇಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಅವರ ಆಂತರಿಕ ವಿಷಯ. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಟುಂಬವಾಗಿ ನಾವು ಒಟ್ಟಿಗೆ ಇದ್ದೇವೆ. ಆದರೆ, ರಾಜಕೀಯ ಬೇರೆ ಬೇರೆ" ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು.
ಎನ್ಸಿಪಿ ಎರಡೂ ಬಣಗಳ ವಿಲೀನದ ಮಾತುಕತೆ ಕಳೆದ ನಾಲ್ಕು ತಿಂಗಳಿನಿಂದ ಚರ್ಚೆಯಲ್ಲಿತ್ತು ಮತ್ತು ಅದು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂಬುದು ನಿಜ. ವಿಲೀನ ಮಾತುಕತೆಗೆ ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಭಾಗಿಯಾಗಿದ್ದರು. ಈಗ ಅಜಿತ್ ಇಲ್ಲ, ಆದ್ದರಿಂದ ಎರಡೂ ಎನ್ಸಿಪಿಗಳ ವಿಲೀನವು ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.





