ಪಹಲ್ಗಾಮ್ ದಾಳಿಕೋರರಲ್ಲಿ ಮೂವರು ಪಾಕಿಸ್ತಾನದವರು, ಸ್ಥಳೀಯರಲ್ಲ: ಎನ್ಐಎ

File Photo: PTI
ಹೊಸದಿಲ್ಲಿ : ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಇಬ್ಬರು ಕಾಶ್ಮೀರಿ ಸ್ಥಳೀಯರನ್ನು ಬಂಧಿಸಲಾಗಿದೆ. ಆದರೆ, ಮೂವರು ದಾಳಿಕೋರರು ಪಾಕಿಸ್ತಾನದವರು ಎಂದು ಎನ್ಐಎ ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.
ʼಭಯೋತ್ಪಾದಕರು ಪಹಲ್ಗಾಮ್ನ ಬಟ್ಕೋಟ್ನ ಪರ್ವೈಝ್ ಅಹ್ಮದ್ ಜೋಥರ್ ಮತ್ತು ಹಿಲ್ ಪಾರ್ಕ್ನ ಬಶೀರ್ ಅಹ್ಮದ್ ಜೋಥರ್ ಅವರ ಮನೆಗೆ ಹೋಗಿ ಆಹಾರ ಸೇವಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅವರು ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ. ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ -ತೋಯ್ಬಾಗೆ ಸೇರಿದ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದ್ದಾರೆʼ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಪಹಲ್ಗಾಮ್ ದಾಳಿಯ ಎರಡು ದಿನಗಳ ನಂತರ ಜಮ್ಮುಕಾಶ್ಮೀರ ಪೊಲೀಸರು ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಪಾಕಿಸ್ತಾನದ ಪ್ರಜೆಗಳಾದ ಹಾಶಿಮ್ ಮೂಸಾ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಮತ್ತು ಕಾಶ್ಮೀರದ ಆದಿಲ್ ಹುಸೇನ್ ಥೋಕರ್ ಎಂದು ಗುರುತಿಸಲಾಗಿತ್ತು. ರೇಖಾಚಿತ್ರಗಳಲ್ಲಿರುವ ಮೂವರು ಪಹಲ್ಗಾಮ್ ದಾಳಿಕೋರರಲ್ಲ ಎಂದು ಎನ್ಐಎ ಹೇಳಿದೆ.
ಕಳೆದ ಅಕ್ಟೋಬರ್ 20ರಂದು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿ ಝಡ್-ಮೋರ್ಹ್ ಸುರಂಗವನ್ನು ನಿರ್ಮಿಸುತ್ತಿದ್ದ ಕಂಪೆನಿಯ ಏಳು ಉದ್ಯೋಗಿಗಳ ಹತ್ಯೆಯಲ್ಲಿ ಭಾಗಿಯಾಗಿದ್ದ ಸುಲೇಮಾನ್ ಶಾ ದಾಳಿಕೋರರಲ್ಲಿ ಓರ್ವನೆಂದು ಮೂಲಗಳು ತಿಳಿಸಿವೆ. ದಾಳಿಯ ಸಹ ಆರೋಪಿ ಜುನೈದ್ ರಂಝಾನ್ ಭಟ್ ಡಿಸೆಂಬರ್ 4ರಂದು ಜಮ್ಮು ಕಾಶ್ಮೀರ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದೆ.
ಆತನ ಫೋನ್ನಿಂದ ಪೊಲೀಸರು ಜುನೈದ್ ಮತ್ತು ಇತರ ಮೂವರು ಭಯೋತ್ಪಾದಕರ ಫೋಟೋವನ್ನು ವಶಪಡಿಸಿಕೊಂಡಿದ್ದರು. ತನಿಖೆಯ ಸಮಯದಲ್ಲಿ, ಎನ್ಐಎ ಜುನೈದ್ನ ಫೋನ್ನಿಂದ ವಶಪಡಿಸಿಕೊಂಡ ವಿಭಿನ್ನ ಚಿತ್ರಗಳನ್ನು ಬಂಧಿತ ಇಬ್ಬರು ಸ್ಥಳೀಯರಿಗೆ ತೋರಿಸಿದ್ದಾರೆ. ಅವರು ಪಹಲ್ಗಾಮ್ ದಾಳಿಗೆ ಎರಡು ದಿನಗಳ ಮೊದಲು ನಮ್ಮನ್ನು ಭೇಟಿ ಮಾಡಿದ್ದಾರೆ ಎಂದು ದೃಢಪಡಿಸಿದ್ದಾರೆ.
ಈ ಫೋಟೊಗಳನ್ನು ಹಲವಾರು ಸಾಕ್ಷಿಗಳಿಗೆ ತೋರಿಸಲಾಗಿದೆ. ಅವರು ಅಪರಾಧ ಸ್ಥಳದಲ್ಲಿ ಇದ್ದ ಬಗ್ಗೆ ಹಲವರು ದೃಢಪಡಿಸಿದ್ದಾರೆ. ಪಹಲ್ಗಾಮ್ನಲ್ಲಿ ದಾಳಿ ನಡೆಸಿರುವುದು ಝಡ್-ಮೋರ್ ಭಯೋತ್ಪಾದನಾ ಕೃತ್ಯದ ಆರೋಪಿ ಸುಲೇಮಾನ್ ಶಾ ಸೇರಿದಂತೆ ಮೂವರೂ ಪಾಕಿಸ್ತಾನದ ಭಯೋತ್ಪಾದಕರು ಎಂದು ಮೂಲಗಳು ತಿಳಿಸಿದೆ.
ತನಿಖಾ ಸಂಸ್ಥೆಗಳು ಹಿಂದಿನ ಪ್ರಕರಣಗಳನ್ನು ಮರುಪರಿಶೀಲಿಸುತ್ತಿವೆ ಮತ್ತು ದಾಳಿಕೋರರ ವಿರುದ್ಧ ಬಲವಾದ ಸಾಕ್ಷಿಯನ್ನು ಸಿದ್ದಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
2023ರ ಆಗಸ್ಟ್ನಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಮೂವರು ಸೇನಾ ಸಿಬ್ಬಂದಿಗಳ ಹತ್ಯೆಯಲ್ಲಿ ಮತ್ತು ಕಳೆದ ಮೇ ತಿಂಗಳಲ್ಲಿ ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ವಾಯುಪಡೆಯ ಸಿಬ್ಬಂದಿಯೋರ್ವರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದ ಮತ್ತೊಂದು ದಾಳಿಯಲ್ಲಿ ಸುಲೇಮಾನ್ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ದಾಳಿಕೋರರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ಸ್ಥಳೀಯರನ್ನು NIA ಅಧಿಕಾರಿಗಳು ಬಂಧಿಸುವ ಮೊದಲು, ಕುದರೆ ಸವಾರರು, ಛಾಯಾಗ್ರಾಹಕರು ಸೇರಿದಂತೆ 200ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿತ್ತು.







