ಹೈದರಾಬಾದ್ ಮೂಲದ ವೈದ್ಯೆಯ 8 ವರ್ಷದ ಹೋರಾಟಕ್ಕೆ ಜಯ : ಪಾನೀಯಗಳಿಗೆ ORS ಪದ ಬಳಕೆಗೆ FSSAI ನಿಷೇಧ

Photo: Instagram
ಹೈದರಾಬಾದ್, ಅ.18: ಎಂಟು ವರ್ಷಗಳ ನಿರಂತರ ಹೋರಾಟದ ಬಳಿಕ ಹೈದರಾಬಾದ್ ಮೂಲದ ಪೀಡಿಯಾಟ್ರಿಷನ್ ಡಾ.ಶಿವರಂಜಿನಿ ಸಂತೋಷ್ ಅವರ ಪ್ರಯತ್ನಕ್ಕೆ ದೇಶದ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರ (FSSAI) ಮನ್ನಣೆ ನೀಡಿದೆ. ಬುಧವಾರ ಹೊರಡಿಸಿದ ಮಹತ್ವದ ಆದೇಶದ ಮೂಲಕ, ಯಾವುದೇ ಪ್ಯಾಕೇಜ್ಡ್ ಪಾನೀಯಗಳು ಅಥವಾ ಟೆಟ್ರಾ-ಪ್ಯಾಕ್ ಉತ್ಪನ್ನಗಳು ತಮ್ಮ ಬ್ರ್ಯಾಂಡ್ ಅಥವಾ ಟ್ರೇಡ್ಮಾರ್ಕ್ ಹೆಸರಿನಲ್ಲಿ “ORS” (Oral Rehydration Solution) ಎಂಬ ಪದವನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಈ ನಿರ್ಧಾರವು ವೈದ್ಯಕೀಯ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಮಾರುಕಟ್ಟೆಯಲ್ಲಿ “ORS ಪಾನೀಯ” ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಹಲವಾರು ಉತ್ಪನ್ನಗಳ ವಿರುದ್ಧದ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಪಾನೀಯಗಳು ವೈದ್ಯಕೀಯವಾಗಿ ಮಾನ್ಯಗೊಂಡ ನಿಜವಾದ ORSನ ಉಪ್ಪು ಮತ್ತು ಸಕ್ಕರೆಯ ಸಮತೋಲನವನ್ನು ಪಾಲಿಸದೆ, ಕೇವಲ ಸಿಹಿ ಪಾನೀಯಗಳ ರೂಪದಲ್ಲಿ ಗ್ರಾಹಕರಿಗೆ ಮಾರಾಟವಾಗುತ್ತಿದ್ದು, ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದ್ದವು.
ಡಾ.ಸಂತೋಷ್ ಅವರ ಪ್ರಕಾರ, “ಈ ಉತ್ಪನ್ನಗಳನ್ನು ನಂಬಿ ಮಕ್ಕಳಿಗೆ ನೀಡುವ ಪೋಷಕರು ಅವರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದ್ದರು. ನಿಜವಾದ ORS ದೇಹಕ್ಕೆ ಪುನರ್ಜಲೀಕರಣಕ್ಕೆ ಸಹಾಯ ಮಾಡುವ ಸೂತ್ರದ ಮೇಲೆ ಆಧಾರಿತವಾಗಿದೆ. ಆದರೆ ಹೆಚ್ಚುವರಿ ಸಕ್ಕರೆಯಿರುವ ಪಾನೀಯಗಳು ಕರುಳಿನಲ್ಲಿ ತೊಂದರೆಯುಂಟುಮಾಡುತ್ತದೆ. ಇದು ಅತಿಸಾರಕ್ಕೆ ಕಾರಣವಾಗುತ್ತದೆ,” ಎಂದು ಅವರು ಹೇಳಿದರು.
ಅವರ ಹೋರಾಟವು ಸುಮಾರು ಎಂಟು ವರ್ಷಗಳ ಹಿಂದೆ ಆರಂಭವಾಯಿತು. ಅತಿಸಾರದಿಂದ ಬಳಲುತ್ತಿದ್ದ ಮಕ್ಕಳಿಗೆ ಪೋಷಕರು “ORS ಪಾನೀಯ” ನೀಡುತ್ತಿರುವ ಪ್ರಕರಣಗಳು ತಮ್ಮ ಕ್ಲಿನಿಕ್ನಲ್ಲಿ ಹೆಚ್ಚುತ್ತಿರುವುದನ್ನು ಗಮನಿಸಿದ ನಂತರ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನಜಾಗೃತಿ ಮೂಡಿಸಲು ಮುಂದಾದರು. ವೈದ್ಯಕೀಯ ವಲಯದ ತಜ್ಞರು, ಪೋಷಕರು ಹಾಗೂ ಸಾರ್ವಜನಿಕರಿಂದ ಅವರಿಗೆ ಭಾರೀ ಬೆಂಬಲ ದೊರೆಯಿತು.
“ORS ಲಕ್ಷಾಂತರ ಜೀವಗಳನ್ನು ಉಳಿಸಿರುವ ವೈದ್ಯಕೀಯ ಆವಿಷ್ಕಾರ. ಇದರಲ್ಲಿ ನಿಖರ ಪ್ರಮಾಣದ ಗ್ಲೂಕೋಸ್, ಸೋಡಿಯಂ ಕ್ಲೋರೈಡ್ ಮತ್ತು ಪೊಟ್ಯಾಸಿಯಮ್ ಕ್ಲೋರೈಡ್ ಇರಬೇಕು. ಈ ಪ್ರಮಾಣವೇ ದೇಹವನ್ನು ಪುನರ್ಜಲೀಕರಿಸುತ್ತದೆ,” ಎಂದು ಅವರು ವಿವರಿಸಿದರು.
FSSAIನ ಈ ನಿಷೇಧದಿಂದ ಮುಂದೆ ಯಾವುದೇ ಕಂಪೆನಿ “ORS” ಪದವನ್ನು ತಮ್ಮ ಉತ್ಪನ್ನ ಹೆಸರಿನಲ್ಲಿ ಬಳಸಲು ಸಾಧ್ಯವಿಲ್ಲ. ಇದರಿಂದ ತಪ್ಪುಮಾಹಿತಿಯ ಪ್ಯಾಕೇಜ್ಡ್ ಪಾನೀಯಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ದೊಡ್ಡ ಹೆಜ್ಜೆ ಇಟ್ಟಂತಾಗಿದೆ.
“ದೊಡ್ಡ ಕಂಪೆನಿಗಳ ಒತ್ತಡಗಳ ನಡುವೆಯೂ ನಾವು ಸತ್ಯದ ಹಾದಿಯಲ್ಲಿ ನಡೆದಿದ್ದೇವೆ. ಇಂದು ಆ ಹೋರಾಟಕ್ಕೆ ಫಲ ದೊರೆತಿದೆ,” ಎಂದು ಡಾ.ಸಂತೋಷ್ ಕೃತಜ್ಞತೆಯೊಂದಿಗೆ ಪ್ರತಿಕ್ರಿಯಿಸಿದರು.







