ಇನ್ನು ಮುಂದೆ ಬಿಜೆಪಿಗೆ ಬೆಂಬಲವಿಲ್ಲ : ನವೀನ್ ಪಟ್ನಾಯಕ್

ನವೀನ್ ಪಟ್ನಾಯಕ್ | PTI
ಭುವನೇಶ್ವರ : ಬಿಜೆಡಿಯು ಇನ್ನು ಮುಂದೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಪಕ್ಷಾಧ್ಯಕ್ಷ ಹಾಗೂ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸೋಮವಾರ ಘೋಷಿಸಿದರು.
ಇಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮೇಲ್ಮನೆಯಲ್ಲಿ ಪ್ರಬಲ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವಂತೆ ಬಿಜೆಡಿಯ ಒಂಬತ್ತು ರಾಜ್ಯಸಭಾ ಸದಸ್ಯರಿಗೆ ಸೂಚಿಸಿದ ಪಟ್ನಾಯಕ್, ಸದನದಲ್ಲಿ ರಾಜ್ಯದ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಸೂಕ್ತ ರೀತಿಯಲ್ಲಿ ಪ್ರಸ್ತಾವಿಸುವಂತೆಯೂ ಕೇಳಿಕೊಂಡರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯಲ್ಲಿ ಪಕ್ಷದ ನಾಯಕ ಸಸ್ಮಿತ್ ಪಾತ್ರಾ ಅವರು, ಇನ್ನು ಮುಂದೆ ಬಿಜೆಡಿ ಸದಸ್ಯರು ಸದನದಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಲು ಮಾತ್ರ ಸೀಮಿತರಾಗಿರುವುದಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಒಡಿಶಾದ ಹಿತಾಸಕ್ತಿಗಳನ್ನು ಕಡೆಗಣಿಸಿದರೆ ಪ್ರತಿಭಟನೆ ನಡೆಸಲೂ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯಸಭೆಯಲ್ಲಿ ಪಕ್ಷದ ಒಂಭತ್ತು ಸದಸ್ಯರು ಪ್ರಬಲ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಮತ್ತು ರಾಜ್ಯದ ಜನರ ಹಕ್ಕುಗಳಿಗಾಗಿ ಸಂಸತ್ತಿನಲ್ಲಿ ಹೋರಾಡಲು ಪಟ್ನಾಯಕ್ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಮುಂದೆ ಬಿಜೆಡಿ ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಕಳೆದ ಕೆಲವು ವರ್ಷಗಳಲ್ಲಿ ಬಿಜೆಡಿ ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು ಮಾತ್ರವಲ್ಲ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2019 ಮತ್ತು 2024ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಲೂ ನೆರವಾಗಿತ್ತು.
1997ರಲ್ಲಿ ಸ್ಥಾಪನೆಗೊಂಡ ಬಳಿಕ ಬಿಜೆಡಿ ಇದೇ ಮೊದಲ ಬಾರಿಗೆ ಲೋಕಸಭಾ ಸ್ಥಾನವನ್ನು ಗೆಲ್ಲಲು ವಿಫಲಗೊಂಡಿದೆ ಮತ್ತು 24 ವರ್ಷಗಳ ಆಡಳಿತದ ಬಳಿಕ ಒಡಿಶಾದಲ್ಲಿ ಅಧಿಕಾರವನ್ನೂ ಕಳೆದುಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.







