ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನಿದೆ, ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ: ಇಂಡಿಯನ್ ಆಯಿಲ್ ಸ್ಪಷ್ಟನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶಾದ್ಯಂತ ಸಾಕಷ್ಟು ಇಂಧನ(ಪೆಟ್ರೋಲ್, ಡಿಸೇಲ್) ದಾಸ್ತಾನಿದೆ. ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಶುಕ್ರವಾರ ಸ್ಪಷ್ಟನೆಯನ್ನು ನೀಡಿದೆ.
ಭಾರತ –ಪಾಕಿಸ್ತಾನದ ಉದ್ವಿಗ್ನತೆಯ ಮಧ್ಯೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ. ಯಾವುದೇ ಸಮಸ್ಯೆಯಿಲ್ಲದೆ ಸರಾಗವಾಗಿ ಸರಬರಾಜು ಆಗುತ್ತಿದೆ. ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ. ಇಂಧನ ಮತ್ತುಎಲ್ಪಿಜಿ ನಮ್ಮ ಎಲ್ಲಾ ಔಟ್ಲೈಟ್ಗಳಲ್ಲಿ ಸುಲಭವಾಗಿ ಲಭ್ಯವಿರಲಿದೆ. ಜನರು ಶಾಂತವಾಗಿರಿ ಮತ್ತು ಅನಗತ್ಯವಾಗಿ ಧಾವಿಸಬೇಡಿ ಎಂದು ಸಲಹೆ ನೀಡಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಪೆಟ್ರೋಲ್, ಡೀಸಿಲ್ ವ್ಯತ್ಯಯದ ಭೀತಿಯಿಂದ ದೇಶದ ಕೆಲವೆಡೆ ಜನರು ಪೆಟ್ರೋಲ್ ಬಂಕ್ಗಳಲ್ಲಿ ಜಮಾಯಿಸಿದ್ದರು. ಇಂಧನವನ್ನು ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುವ ಪೋಸ್ಟ್ಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.