ಕೋವಿಡ್ ಉಪಪ್ರಭೇದ ಜೆಎನ್.1 ಬಗ್ಗೆ ಆತಂಕ ಪಡಬೇಕಿಲ್ಲ: ಕೇರಳ ಆರೋಗ್ಯ ಸಚಿವೆ
Photo: Twitter
ತಿರುವನಂತಪುರ: ರಾಜ್ಯದಲ್ಲಿ ಪತ್ತೆಯಾಗಿರುವ ಜೆಎನ್.1 ಕೋವಿಡ್ ಉಪಪ್ರಭೇದವಾಗಿದ್ದು, ಆತಂಕ ಪಡಬೇಕಾದ ಯಾವುದೇ ಕಾರಣವಿಲ್ಲ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರವಿವಾರ ಇಲ್ಲಿ ಹೇಳಿದರು.
ಇಂಡಿಯನ್ ಸಾರ್ಸ್-ಕೋವ್-2 ಜಿನೊಮಿಕ್ಸ್ ಕರ್ನ್ಸಾರ್ಟಿಯಮ್ ನ ದೈನಂದಿನ ಕಣ್ಗಾವಲು ಚಟುವಟಿಕೆಯ ಭಾಗವಾಗಿ ಈ ಪ್ರಭೇದವನ್ನು ಪತ್ತೆ ಹಚ್ಚಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್,‘ಆತಂಕ ಪಡುವಂಥದ್ದೇನೂ ಇಲ್ಲ. ಅದೊಂದು ಉಪಪ್ರಭೇದವಾಗಿದ್ದು, ಅದನ್ನು ಈಗ ಪತ್ತೆ ಹಚ್ಚಲಾಗಿದೆ. 2-3 ತಿಂಗಳುಗಳ ಹಿಂದೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಗಾಗಿದ್ದ ಭಾರತೀಯರಲ್ಲಿ ಈ ಪ್ರಭೇದ ಪತ್ತೆಯಾಗಿತ್ತು. ಅದು ಭಾರತದ ಇತರ ಭಾಗಗಳಲ್ಲಿಯೂ ಅಸ್ತಿತ್ವದಲ್ಲಿದೆ. ಕೇರಳವು ಅದನ್ನು ಪತ್ತೆ ಹಚ್ಚಿದೆ. ಕೇರಳದ ಆರೋಗ್ಯ ವ್ಯವಸ್ಥೆ ತುಂಬ ಉತ್ತಮವಾಗಿರುವುದರಿಂದ ಜಿನೊಮಿಕ್ ಸೀಕ್ವೆನ್ಸಿಂಗ್ ಮೂಲಕ ಅದನ್ನು ನಾವು ಪತ್ತೆ ಹಚ್ಚಲು ಸಾಧ್ಯವಾಗಿದೆ ’ಎಂದು ತಿಳಿಸಿದರು.
ಆದರೂ, ಕಾಯಿಲೆಗಳನ್ನು ಹೊಂದಿರುವವರು ಮುಂಜಾಗ್ರತೆಯನ್ನು ವಹಿಸುವಂತೆ ಎಚ್ಚರಿಕೆ ನೀಡಿದ ಅವರು, ಸರಕಾರವು ಕಟ್ಟೆಚ್ಚರದಲ್ಲಿದೆ ಮತ್ತು ಪರಿಸ್ಥಿತಿಯ ಮೇಲೆ ನಿಗಾಯಿರಿಸಿದೆ ಎಂದರು.
ಶೀತಜ್ವರದ ಸೌಮ್ಯ ಲಕ್ಷಣಗಳನ್ನು ಹೊಂದಿದ್ದ ತಿರುವನಂತಪುರ ಜಿಲ್ಲೆಯ ಕರಕುಳಮ್ನ 79ರ ಹರೆಯದ ಮಹಿಳೆಯ ಸ್ಯಾಂಪಲ ನ್ ಆರ್ಟಿ-ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಡಿ.8ರಂದು ಪಾಸಿಟಿವ್ ವರದಿ ಬಂದಿದ್ದು, ಅದು ಕೇರಳದಲ್ಲಿ ಪತ್ತೆಯಾದ ಮೊದಲ ಕೋವಿಡ್ ಉಪಪ್ರಭೇದ ಜೆಎನ್.1 ಪ್ರಕರಣವಾಗಿತ್ತು ಎಂದು ಐಸಿಎಂಆರ್ ನಿದೇಶಕ ಡಾ.ರಾಜೀವ ಬಹ್ಲ್ ಸುದ್ದಿಸಂಸ್ಥೆಗೆ ತಿಳಿಸಿದರು.
ಮಹಿಳೆ ಈಗ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.