ಕಳೆದೊಂದು ದಶಕದಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ಹೊಸದಾಗಿ ದುಭಾಷಿಗಳ ನೇಮಕವಾಗಿಲ್ಲ: ವರದಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯ | PTI
ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ಕಳೆದೊಂದು ದಶಕದಲ್ಲಿ ಹೊಸದಾಗಿ ದುಭಾಷಿಗಳನ್ನು ನೇಮಕ ಮಾಡಿಕೊಂಡಿಲ್ಲ ಮತ್ತು ಈ ಕೇಡರ್ನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತಿದೆ ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿವೆ ಎಂದು The Hindu ವರದಿ ಮಾಡಿದೆ.
ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಈ ಕೇಡರ್ನ್ನು ಆರಂಭಿಸಲಾಗಿತ್ತು. ದುಭಾಷಿಗಳ ವ್ಯಾಖ್ಯಾನದ ಗುಣಮಟ್ಟ ತೃಪ್ತಿಕರವಾಗಿಲ್ಲ, ಹೀಗಾಗಿ ಈ ಕೇಡರ್ನ್ನು ಅಂತ್ಯಗೊಳಿಸಲು ಎಂಇಎ ನಿರ್ಧರಿಸಿದೆ. ಆದ್ದರಿಂದ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್-ಎ)ಗೆ ನೇಮಕಗೊಳ್ಳುವವರಿಗೆ ಹೆಚ್ಚು ಕಠಿಣ ಭಾಷಾ ತರಬೇತಿ ಆಯ್ಕೆಗಳನ್ನು ಒದಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದವು.
ವಿದೇಶಿ ನಾಯಕರನ್ನು ಭೇಟಿಯಾಗುವಾಗ ಆಗಾಗ್ಗೆ ದುಭಾಷಿಗಳನ್ನು ಬಳಸುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳೊಂದಿಗೆ ಕೆಲಸ ಮಾಡುವ ಮೂಲಕ ದುಭಾಷಿಗಳ ಹುದ್ದೆಯು ಪ್ರಾಮುಖ್ಯವನ್ನು ಪಡೆದುಕೊಂಡಿತು. ತೀರ ಇತ್ತೀಚಿಗೆ ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಮಾತುಕತೆ ಸಂದರ್ಭದಲ್ಲಿ ಮೋದಿ ದುಭಾಷಿಗಳನ್ನು ಬಳಸಿಕೊಂಡಿದ್ದರು. ದುಭಾಷಿಗಳು ಅನುವಾದದ ಜೊತೆಗೆ ಅದನ್ನು ಅತ್ಯುತ್ತಮವಾಗಿ ವ್ಯಾಖ್ಯಾನಿಸುವ ಕೌಶಲ್ಯವನ್ನೂ ಹೊಂದಿರಬೇಕಾಗುತ್ತದೆ. ಆದರೆ ಹೆಚ್ಚಿನ ದುಬಾಷಿಗಳು ವಿಶೇಷ ಕೌಶಲ್ಯದ ಅಗತ್ಯವಿರುವ ನಿಜವಾದ ವ್ಯಾಖ್ಯಾನಕ್ಕಿಂತ ಕೇವಲ ಅನುವಾದದಲ್ಲಿ ತೊಡಗಿಸಿಕೊಂಡಿರುವುದು ಕಾಲಾನಂತರದಲ್ಲಿ ಸ್ಪಷ್ಟವಾಗಿದೆ ಎಂದು ತಿಳಿಸಿದ ಮೂಲಗಳು, ಯುವ ಐಎಫ್ಎಸ್ ಅಧಿಕಾರಿಗಳು ಹೆಚ್ಚುವರಿ ವ್ಯಾಖ್ಯಾನ ಕೌಶಲ್ಯಗಳನ್ನು ಗಳಿಸಬಲ್ಲರು ಎಂಬ ನಿರೀಕ್ಷೆಯೊಂದಿಗೆ ವಿದೇಶಿ ಭಾಷೆಗಳಲ್ಲಿ ಪರಿಣತಿ ಹೊಂದಲು ಅವರನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದೆ.
1946, ಅಕ್ಟೋಬರ್ನಲ್ಲಿ ಮಧ್ಯಂತರ ಸರಕಾರದ ಅವಧಿಯಲ್ಲಿ ಆರಂಭಗೊಂಡಿದ್ದ ಭಾರತೀಯ ವಿದೇಶಾಂಗ ಸೇವೆಯು ಮೊದಲು ದುಭಾಷಿಗಳ ಕೇಡರ್ ಹೊಂದಿರಲಿಲ್ಲ. ಭಾರತೀಯ ನಾಗರಿಕ ಸೇವೆ(ಐಸಿಎಸ್) ಮತ್ತು ಇತರ ಹಿನ್ನೆಲೆಗಳ ಅಧಿಕಾರಿಗಳು ತಮ್ಮ ಹಿಂದಿನ ತರಬೇತಿಯಿಂದ ವಿದೇಶಿ ಭಾಷಾ ಕೌಶಲ್ಯಗಳನ್ನು ಹೊಂದಿರುತ್ತಿದ್ದರು. ಕ್ರಮೇಣ ಸಚಿವಾಲಯದಲ್ಲಿ ವಿಧ್ಯುಕ್ತ ದುಭಾಷಿ ವಿಭಾಗವನ್ನು ಆರಂಭಿಸಲಾಗಿತ್ತು ಮತ್ತು ಅಂತಿಮವಾಗಿ ವಿಧ್ಯುಕ್ತ ದುಭಾಷಿ ಕೇಡರ್ ಆಗಿ ಪರಿವರ್ತನೆಗೊಂಡಿತ್ತು.
ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಯುವ ಅಧಿಕಾರಿಗಳು ವಿದೇಶಾಂಗ ಸೇವೆಗೆ ನೇರವಾಗಿ ಆಯ್ಕೆಗೊಂಡಾಗ ವಿದೇಶಿ ಭಾಷಾ ಕೌಶಲ್ಯವು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಹೊಸದಾಗಿ ನೇಮಕಗೊಂಡವರಿಗೆ ತಮ್ಮ ಮಾತೃಭಾಷೆಯಲ್ಲದ ಒಂದು ‘ಕಡ್ಡಾಯ ವಿದೇಶಿ ಭಾಷೆ’ ಮತ್ತು ಒಂದು ‘ಐಚ್ಛಿಕ ಭಾಷೆ’ಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತಿತ್ತು.
‘ಕಡ್ಡಾಯ ವಿದೇಶಿ ಭಾಷೆ’ಯು ಐಎಫ್ಎಸ್ನ ತರಬೇತಿಯ ಆರು ಭಾಗಗಳಲ್ಲಿ ಒಂದಾಗಿತ್ತು ಮತ್ತು ಅಧಿಕಾರಿಗಳನ್ನು ತರಬೇತಿಗಾಗಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಆದರೆ ಅಂತಹ ಅಧಿಕಾರಿಗಳ ಮೊದಲ ತಂಡವು 1970ರ ದಶಕದ ಮಧ್ಯಭಾಗದಲ್ಲಿ ನಿವೃತ್ತಗೊಂಡಾಗ ಮತ್ತು ರಷ್ಯನ್,ಅರೆಬಿಕ್,ಚೀನಿ ಮತ್ತು ಜಪಾನಿ ಭಾಷೆಯ ಜ್ಞಾನದ ಅಗತ್ಯವು ಹೆಚ್ಚುತ್ತಿದ್ದ ಜಾಗತಿಕ ಪರಿಸ್ಥಿತಿಗಳಿಂದಾಗಿ ಸಮರ್ಪಿತ ಭಾಷಾ ತಜ್ಞರನ್ನು ಹೊಂದಿರುವುದು ಅಗತ್ಯವೆಂದು ಪರಿಗಣಿಸಲಾಗಿತ್ತು. ಹೀಗಾಗಿ ಪ್ರತ್ಯೇಕ ದುಭಾಷಿ ಕೇಡರ್ನ್ನು ರಚಿಸುವ ಪ್ರಕ್ರಿಯೆ 1970ರ ದಶಕದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು ಮತ್ತು ಕೆಲ ವಿಳಂಬಗಳ ಬಳಿಕ 1984ರ ಆರಂಭದಲ್ಲಿ ದುಭಾಷಿಗಳ ನೇಮಕ ಪ್ರಾರಂಭಗೊಂಡಿತ್ತು.
ಪ್ರಧಾನ ಮಂತ್ರಿ ಮತ್ತು ಇತರ ಸಚಿವರಿಗೆ ವ್ಯಾಖ್ಯಾನ ಸೇವೆಯನ್ನು ಒದಗಿಸುವ ಜೊತೆಗೆ ಇಂಗ್ಲಿಷ್ನ್ನು ನಿರರ್ಗಳವಾಗಿ ಮಾತನಾಡದ ದೇಶಗಳಲ್ಲಿಯ ಭಾರತೀಯ ರಾಯಭಾರ ಕಚೇರಿಗಳಲ್ಲೂ ದುಭಾಷಿಗಳು ಅಗತ್ಯವಾಗಿದ್ದಾರೆ. 2004ರಲ್ಲಿ ಇರಾಕ್ನಲ್ಲಿ ಮೂವರು ಭಾರತೀಯ ಟ್ರಕ್ ಚಾಲಕರ ಅಪಹರಣದಂತಹ ಹಲವಾರು ಉದ್ವಿಗ್ನ ಸಂದರ್ಭಗಳಲ್ಲಿ ಭಾರತೀಯ ದುಭಾಷಿಗಳು ನಿರ್ಣಾಯಕ ಪಾತ್ರವನ್ನೂ ವಹಿಸಿದ್ದರು.







