ಜಂಟಿ ಸದನ ಸಮಿತಿಯನ್ನು ಬಹಿಷ್ಕರಿಸುವುದಾಗಿ ಯಾವ ಪಕ್ಷವೂ ನನಗೆ ಪತ್ರ ಬರೆದಿಲ್ಲ: ಓಂ ಬಿರ್ಲಾ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ | PC : PTI
ಹೊಸದಿಲ್ಲಿ: ಗಂಭೀರ ಆರೋಪಗಳ ಮೇಲೆ 30 ದಿನಗಳ ಕಾಲ ಸತತವಾಗಿ ಬಂಧನಕ್ಕೀಡಾಗುವ ಸರಕಾರದ ಉನ್ನತ ವ್ಯಕ್ತಿಗಳನ್ನು ಅವರ ಹುದ್ದೆಗಳಿಂದ ತೆಗೆದು ಹಾಕುವ ಪ್ರಸ್ತಾವನೆ ಹೊಂದಿರುವ ಮೂರು ಮಸೂದೆಗಳನ್ನು ಪರಿಶೀಲನೆಗೆ ಒಪ್ಪಿಸಲಾಗಿರುವ ಜಂಟಿ ಸದನ ಸಮಿತಿಯನ್ನು ಬಹಿಷ್ಕರಿಸುವುದಾಗಿ ಯಾವ ಪಕ್ಷವೂ ನನಗೆ ಪತ್ರ ಬರೆದಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಶಿವಸೇನೆ (ಉದ್ಧವ್ ಬಣ) ಹಾಗೂ ಆಮ್ ಆದ್ಮಿ ಪಕ್ಷ ತಾವು ಜಂಟಿ ಸದನ ಸಮಿತಿಯ ಭಾಗವಾಗುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದು, ಈ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ವಿಪಕ್ಷಗಳು ಮೂರು ಮಸೂದೆಗಳ ಪರಿಶೀಲನೆಗಾಗಿ ರಚಿಸಲಾಗುವ ಜಂಟಿ ಸದನ ಸಮಿತಿಯನ್ನು ಬಹಿಷ್ಕರಿಸುತ್ತವೆ ಎಂಬ ವಿಷಯದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓಂ ಬಿರ್ಲಾ, “ಜಂಟಿ ಸದನ ಸಮಿತಿ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವ ಪಕ್ಷವೂ ನನಗೆ ಈ ಕುರಿತು ಲಿಖಿತ ಸಂವಹನ ರವಾನಿಸಿಲ್ಲ” ಎಂದು ಓಂ ಬಿರ್ಲಾ ಸ್ಪಷ್ಟಪಡಿಸಿದರು.
ಮಾನ್ಸೂನ್ ಅಧಿವೇಶದ ಕೊನೆಯ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರಾಡಳಿತ ಪ್ರದೇಶ ಸರಕಾರಗಳು (ತಿದ್ದುಪಡಿ) ಮಸೂದೆ, ಸಂವಿಧಾನ (130ನೇ ತಿದ್ದುಪಡಿ ಮಸೂದೆ) ಹಾಗೂ ಜಮ್ಮು ಮತ್ತು ಕಾಶ್ಮೀರರ ಮಾನ್ಯತೆ (ತಿದ್ದುಪಡಿ) ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಗಳು ಗಂಭೀರ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಜೈಲುವಾಸ ಅನುಭವಿಸುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಹುದ್ದೆಯಿಂದ ತೆಗೆದು ಹಾಕುವ ಪ್ರಸ್ತಾವನೆ ಹೊಂದಿವೆ.







