ಪ್ರಧಾನಿ ಸೆಲ್ಫೀ ಪಾಯಿಂಟ್ ಗಳು ಸರಕಾರದ ಸಾಧನೆಗಳನ್ನು ಬಿಂಬಿಸಿದರೆ ಸಮಸ್ಯೆಯಿಲ್ಲ: ದಿಲ್ಲಿ ಹೈಕೋರ್ಟ್

Photo credit: freepressjournal.in
ಹೊಸದಿಲ್ಲಿ: ಯಾವುದೇ ರಾಜಕೀಯ ಚಿಹ್ನೆ ಮತ್ತು ಯಾವುದೇ ರಾಜಕೀಯ ಪಕ್ಷದ ಪ್ರಚಾರ ಇಲ್ಲದಿದ್ದರೆ, ಸರಕಾರ ತನ್ನ ಸಾಧನೆಗಳನ್ನು ವೈಭವೀಕರಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ವಿಕಸಿತ ಭಾರತ್ ಸಂಕಲ್ಪ ಯಾತ್ರೆಗೆ ಸಾರ್ವಜನಿಕ ಸಂಪನ್ಮೂಲಗಳು ಮತ್ತು ಸರಕಾರಿ ಅಧಿಕಾರಿಗಳ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ವಿಕಸಿತ ಭಾರತ್ ಸಂಕಲ್ಪ ಯಾತ್ರೆಯು ಕೇಂದ್ರ ಸರಕಾರದ ಸಾಧನೆಗಳನ್ನು ಪ್ರಚುರಪಡಿಸುವ ಅಭಿಯಾನವಾಗಿದೆ. ಯಾತ್ರೆಯಲ್ಲಿ ಸಾರ್ವಜನಿಕ ಸಂಪನ್ಮೂಲಗಳು ಮತ್ತು ಸರಕಾರಿ ಅಧಿಕಾರಿಗಳ ಬಳಕೆಯನ್ನು ಪ್ರಶ್ನಿಸಿ ಮಾಜಿ ಐಎಎಸ್ ಅಧಿಕಾರಿ ಇ.ಎ.ಎಸ್ ಶರ್ಮ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹ್ಮದಾಬಾದ್ ನ ಮಾಜಿ ಡೀನ್ ಜಗದೀಪ್ ಎಸ್. ಛೋಕರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಪ್ರಧಾನಿಯು ಚುನಾಯಿತ ವ್ಯಕ್ತಿಯಾಗಿದ್ದು ಸಾಂವಿಧಾನಿಕ ಹುದ್ದೆಯನ್ನು ಹೊಂದಿದವರಾಗಿದ್ದಾರೆ ಎಂದು ದಿಲ್ಲಿ ಹೈಕೋರ್ಟ್ ನ ಉಸ್ತುವಾರಿ ಮುಖ್ಯ ನ್ಯಾಯಾಧೀಶ ಮನಮೋಹನ್ ಮತ್ತು ನ್ಯಾಯಾಧೀಶ ಮನ್ಮೀತ್ ಪ್ರೀತಮ್ ಸಿಂಗ್ ಅರೋರ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು. ‘‘ಅವರು ಯಾರದ್ದೋ ರಾಜಕೀಯ ಎದುರಾಳಿ ಆಗಿರಬಹುದು. ಆದರೆ, ಕಲ್ಯಾಣ ಯೋಜನೆಗಳು ಕಟ್ಟಕಡೆಯ ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದ್ದರೆ, ನೀವು (ಅರ್ಜಿದಾರರು) ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಸರಕಾರದ ಕೆಲಸಗಳನ್ನು ಎತ್ತಿ ತೋರಿಸಲು ಪ್ರಮುಖ ಸ್ಥಳಗಳಲ್ಲಿ ಸೆಲ್ಫೀ ಪಾಯಿಂಟ್ ಗಳನ್ನು ಅಭಿವೃದ್ಧಿಪಡಿಸುವಂತೆ ಕೋರಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ, ಸೈನಿಕ ಶಾಲೆ ಮತ್ತು ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ಮುಂತಾದ ಇಲಾಖೆಗಳಿಗೆ ರಕ್ಷಣಾ ಲೆಕ್ಕಪತ್ರಗಳ ಮಹಾ ನಿರ್ದೇಶಕರು ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಶರ್ಮ ಮತ್ತು ಛೋಕರ್ ನ್ಯಾಯಾಲಯಕ್ಕೆ ಹೋಗಿದ್ದರು.
ನವೆಂಬರ್ 20ರಿಂದ ಜನವರಿ 25ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ‘ಜಿಲ್ಲಾ ರಥ ಪ್ರಭಾರಿ’ (ವಿಶೇಷ ಅಧಿಕಾರಿ)ಗಳಾಗಿ ಗ್ರಾಮ ಪಂಚಾಯತ್ ಮಟ್ಟದವರೆಗಿನ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ನಿರ್ದೇಶಕರ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸುವಂತೆ ಕೋರಿ ಕೇಂದ್ರ ಸರಕಾರವು ಅಕ್ಟೋಬರ್ 17ರಂದು ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಕಳುಹಿಸಿತ್ತು.
‘‘ರಾಮ ಮಂದಿರ, ಗುಜರಾತ್ ಗಲಭೆ ವಿಷಯಗಳ ಬಗ್ಗೆ ರಾಜಕೀಯ ನಾಯಕರಿಂದ ಭಾಷಣ’’
ಕಳೆದ ಒಂಭತ್ತು ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷ ಸರಕಾರದ ಸಾಧನೆಗಳನ್ನು ಪ್ರಚುರಪಡಿಸುವ ಅಭಿಯಾನ ನೇತೃತ್ವವನ್ನು ದೇಶದ ಸರಕಾರಿ ಅಧಿಕಾರಿಗಳು ವಹಿಸುತ್ತಿದ್ದಾರೆ.
ಈ ಅಭಿಯಾನವು ಸರಕಾರದ ಯೋಜನೆಗಳಿಗೆ ಪ್ರಚಾರ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಅರ್ಜಿದಾರರ ಪರವಾಗಿ ಹಾಜರಾದ ವಕೀಲರು ವಾದಿಸಿದರು. ಈ ಅಭಿಯಾನದ ವೇಳೆ, ರಾಜಕೀಯ ಪಕ್ಷಗಳ ನಾಯಕರು ರಾಮ ಮಂದಿರ, 2002 ಗುಜರಾತ್ ಗಲಭೆಗಳು ಮತ್ತು ಸಂವಿಧಾನದ 370ನೇ ವಿಧಿಯ ರದ್ದತಿ ಮುಂತಾದ ವಿಷಯಗಳಲ್ಲಿ ಭಾಷಣಗಳನ್ನೂ ಮಾಡುತ್ತಿದ್ದಾರೆ ಎನ್ನುವುದನ್ನು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.







