ತಮಿಳುನಾಡಿನಲ್ಲಿ ಹಿಂದೆ, ಇಂದು, ಮುಂದೆಂದೂ ಹಿಂದಿಗೆ ಅವಕಾಶವಿಲ್ಲ: ಸಿಎಂ ಸ್ಟಾಲಿನ್ ಘೋಷಣೆ

ತಮಿಳುನಾಡು ಸಿಎಂ ಸ್ಟಾಲಿನ್ | Photo: PTI
ಚೆನ್ನೈ: “ತಮಿಳುನಾಡಿನಲ್ಲಿ ಹಿಂದೆಯೂ ಹಿಂದಿಗೆ ಅವಕಾಶವಿರಲಿಲ್ಲ, ಇಂದೂ ಅವಕಾಶವಿಲ್ಲ, ಮುಂದೂ ಕೂಡ ಅವಕಾಶವಿಲ್ಲ” ಎಂದು ರವಿವಾರ ಭಾಷಾ ಹುತಾತ್ಮರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.
ಭಾಷಾ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಎಂ.ಕೆ. ಸ್ಟಾಲಿನ್, “ಭಾಷೆಯನ್ನು ತನ್ನ ಜೀವದಂತೆ ಪ್ರೀತಿಸುವ ರಾಜ್ಯವೊಂದು ಒಗ್ಗಟ್ಟಾಗಿ ಹಿಂದಿ ಹೇರಿಕೆಯ ವಿರುದ್ಧ ಹೋರಾಡಿತ್ತು. ಹಿಂದಿ ಹೇರಿಕೆಯಾದಾಗಲೆಲ್ಲಾ ಅದೇ ತೀವ್ರತೆಯಲ್ಲಿ ಪ್ರತಿಭಟಿಸಿದೆ” ಎಂದು ಹೇಳಿದ್ದಾರೆ.
1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯ ಕ್ಲುಪ್ತ ವಿಡಿಯೊವನ್ನು ಸ್ಟಾಲಿನ್ ಹಂಚಿಕೊಂಡಿದ್ದಾರೆ. ಅದರಲ್ಲಿ ಡಿಎಂಕೆ ಪಕ್ಷದ ಮುಖಂಡರಾದ ಸಿ.ಎನ್. ಅಣ್ಣಾದುರೈ ಹಾಗೂ ಎಂ. ಕರುಣಾನಿಧಿ ಅವರು ಭಾಷಾ ವಿಷಯಕ್ಕೆ ನೀಡಿದ ಕೊಡುಗೆಗಳನ್ನು ಉಲ್ಲೇಖಿಸಲಾಗಿದೆ.
“ತಮಿಳುನಾಡು ಹಿಂದಿ ವಿರೋಧಿ ಚಳವಳಿಗೆ ನೇತೃತ್ವ ವಹಿಸಿದ್ದು, ಉಪಖಂಡದಲ್ಲಿ ವಿವಿಧ ಭಾಷಾ ಜನಾಂಗಗಳ ಹಕ್ಕು ಹಾಗೂ ಅಸ್ಮಿತೆಯನ್ನು ರಕ್ಷಿಸಿದೆ” ಎಂದು ಅವರು ಹೇಳಿದ್ದಾರೆ.
“ತಮಿಳಿಗಾಗಿ ತಮ್ಮ ಅಮೂಲ್ಯ ಜೀವಗಳನ್ನು ತ್ಯಾಗ ಮಾಡಿದ ಹುತಾತ್ಮರಿಗೆ ನಾನು ನನ್ನ ಆಭಾರಯುತ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಭಾಷಾ ಕದನದಲ್ಲಿ ಇನ್ನಾವುದೇ ಜೀವ ನಷ್ಟವಾಗುವುದಿಲ್ಲ. ತಮಿಳಿಗಾಗಿನ ನಮ್ಮ ಪ್ರೀತಿ ಎಂದಿಗೂ ಸಾಯುವುದಿಲ್ಲ. ನಾವು ಹಿಂದಿ ಹೇರಿಕೆಯನ್ನು ಎಂದಿಗೂ ವಿರೋಧಿಸುತ್ತೇವೆ” ಎಂದೂ ಅವರು ಘೋಷಿಸಿದ್ದಾರೆ.







