ಬಿಎಸ್ಎ ಕಲಂ 132 ಅಪವಾದಗಳಡಿ ಹೊರತುಪಡಿಸಿ ಕಾನೂನು ಸಲಹೆಗಾಗಿ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ: ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ಭಾರತೀಯ ಸಾಕ್ಷ್ಯ ಅಧಿನಿಯಮದ(ಬಿಎಸ್ಎ)ದ ಕಲಂ 132ರಡಿ ಉಲ್ಲೇಖಿಸಲಾಗಿರುವ ಅಪವಾದಗಳಡಿ (exceptions) ವಿಷಯವು ಒಳಗೊಂಡಿರದ ಹೊರತು ಕ್ರಿಮಿನಲ್ ಪ್ರಕರಣದಲ್ಲಿ ನೀಡಲಾದ ಕಾನೂನು ಸಲಹೆ ಕುರಿತು ವಕೀಲರ ವಿರುದ್ಧ ಯಾವುದೇ ಸಮನ್ಸ್ ಹೊರಡಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಹಾಗೂ ಎನ್.ವಿ.ಅಂಜಾರಿಯಾ ಅವರ ಪೀಠವು ಜಾರಿ ನಿರ್ದೇಶನಾಲಯವು(ಈ.ಡಿ.) ಇಬ್ಬರು ಹಿರಿಯ ವಕೀಲರಿಗೆ ಸಮನ್ಸ್ ಹೊರಡಿಸಿದ ಬಳಿಕ ದಾಖಲಾಗಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಈ ತೀರ್ಪನ್ನು ಪ್ರಕಟಿಸಿತು.
ವಿಷಯವು ಕಲಂ 132ರ ಅಡಿಯಲ್ಲಿಯ ಯಾವುದೇ ಅಪವಾದಗಳಲ್ಲಿ ಒಳಪಟ್ಟಿರದಿದ್ದರೆ ತನಿಖಾಧಿಕಾರಿಗಳು ಪ್ರಕರಣದ ವಿವರಗಳನ್ನು ತಿಳಿದುಕೊಳ್ಳಲು ಆರೋಪಿಯ ಪರ ವಕೀಲರಿಗೆ ಸಮನ್ಸ್ ಹೊರಡಿಸುವಂತಿಲ್ಲ ಎಂದು ನ್ಯಾಯಾಲಯವು ಘೋಷಿಸಿತು.
ಬಿಎಸ್ಎ ಕಲಂ 132 ವಕೀಲರಿಗೆ ನೀಡಲಾಗಿರುವ ವಿಶೇಷ ಹಕ್ಕು ಆಗಿದೆ ಎಂದು ಪೀಠವು ಬೆಟ್ಟು ಮಾಡಿತು.
ಪೋಲಿಸ್ ಅಧೀಕ್ಷಕರಿಗಿಂತ ಕಡಿಮೆಯಲ್ಲದ ದರ್ಜೆಯ ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ವಕೀಲರಿಗೆ ಸಮನ್ಸ್ ಹೊರಡಿಸುವಂತಿಲ್ಲ ಮತ್ತು ಇಂತಹ ಹಿರಿಯ ಅಧಿಕಾರಿಗಳು ವಿಷಯವು ಅಪವಾದಗಳಲ್ಲಿ ಸೇರಿದೆ ಎನ್ನುವುದನ್ನು ದೃಢಪಡಿಸಿಕೊಂಡಿರಬೇಕು ಎಂದು ಪೀಠವು ತಿಳಿಸಿತು. ಸಮನ್ಸ್ ನ್ಯಾಯಾಂಗ ಪುನರ್ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದೂ ಪೀಠವು ಹೇಳಿತು.
ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ದಾಖಲೆಗಳನ್ನು ಹಾಜರು ಪಡಿಸುವಂತೆ ವಕೀಲರಿಗೆ ಯಾವುದೇ ಸಮನ್ಸ್ ಹೊರಡಿಸುವಂತಿಲ್ಲ ಎಂದೂ ಪೀಠವು ಘೋಷಿಸಿತು.
ಕೇರ್ ಹೆಲ್ತ್ ಇನ್ಶೂರನ್ಸ್ ಮಂಜೂರು ಮಾಡಿದ್ದ ಎಂಪ್ಲಾಯಿ ಸ್ಟಾಕ್ ಆಪ್ಶನ್ ಪ್ಲಾನ್ ಕುರಿತು ತನ್ನ ತನಿಖೆಗೆ ಸಂಬಂಧಿಸಿದಂತೆ ಜೂನ್,2025ರಲ್ಲಿ ಈ.ಡಿ.ರೆಲಿಗೇರ್ ಎಂಟರ್ಪ್ರೈಸಸ್ನ ಮಾಜಿ ಅಧ್ಯಕ್ಷೆ ರಷ್ಮಿ ಸಲುಜಾ ಅವರಿಗೆ ಸ್ಟಾಕ್ ಆಪ್ಶನ್ ಮಂಜೂರು ಮಾಡಿದ್ದನ್ನು ಬೆಂಬಲಿಸಿ ಕಾನೂನು ಅಭಿಪ್ರಾಯ ನೀಡಿದ್ದಕ್ಕಾಗಿ ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಪ್ರತಾಪ ವೇಣುಗೋಪಾಲ ಅವರಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕಲಂ 50ರಡಿ ಸಮನ್ಸ್ ಹೊರಡಿಸಿತ್ತು.
ಈ ಕ್ರಮವು ಕಾನೂನು ವೃತ್ತಿಯ ಸ್ವಾತಂತ್ರ್ಯ ಮತ್ತು ವಕೀಲ-ಕಕ್ಷಿದಾರ ಗೋಪ್ಯತೆಯ ಮೂಲಭೂತ ತತ್ವದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ವಕೀಲರ ಸಂಘಗಳು ಆಕ್ಷೇಪಿಸಿದ ಬಳಿಕ ಸಮನ್ಗಳನ್ನು ಹಿಂದೆಗೆದುಕೊಳ್ಳಲಾಗಿತ್ತು.







