ಮಸೂದೆಗಳಿಗೆ ಒಪ್ಪಿಗೆ ಕುರಿತು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ಮಸೂದೆಗಳಿಗೆ ಒಪ್ಪಿಗೆ ನೀಡುವ ಕುರಿತು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನ್ಯಾಯಾಲಯ ಯಾವುದೇ ಕಾಲಮಿತಿ ನಿಗದಿಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂವಿಧಾನದ 143ನೇ ವಿಧಿಯ ಅನ್ವಯ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿದ ಉಲ್ಲೇಖಕ್ಕೆ ಉತ್ತರಿಸಿದ ಸುಪ್ರೀಂ ಕೋರ್ಟ್, ಸಂವಿಧಾನದ 200/201ನೇ ವಿಧಿಗಳ ಅಡಿಯಲ್ಲಿ ಮಸೂದೆಗಳಿಗೆ ಒಪ್ಪಿಗೆ ನೀಡುವ ಕುರಿತು ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಿರ್ಧಾರಗಳಿಗೆ ನ್ಯಾಯಾಲಯ ಯಾವುದೇ ಸಮಯವನ್ನು ವಿಧಿಸಲು ಸಾಧ್ಯವಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜ್ಯಪಾಲರಿಗೆ ಸಮಯದ ಮಿತಿಯನ್ನು ನಿಗದಿಪಡಿಸುವುದು ಸಂವಿಧಾನ ನೀಡಿರುವ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.
ಆದರೆ, ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳದೆ ಅನಿರ್ದಿಷ್ಟವಾಗಿ ವಿಳಂಬ ಮಾಡುವಂತಿಲ್ಲ. ಮಸೂದೆ ಕುರಿತು ಕಾಲಮಿತಿಯೊಳಗೆ ನಿರ್ಧರಿಸಬೇಕು ಎಂದು ನ್ಯಾಯಾಲಯ ಗಮನಿಸಿದೆ. ರಾಜ್ಯಪಾಲರು ಅತಿಯಾದ ವಿಳಂಬ ಮಾಡಿದರೆ, ಯಾವುದೇ ಕಾರಣವಿಲ್ಲದೆ ತೀರ್ಮಾನವನ್ನು ತಡೆಯುತ್ತಿದ್ದರೆ, ಅದು ಶಾಸಕಾಂಗ ಪ್ರಕ್ರಿಯೆಯನ್ನು ಅಡ್ಡಿಪಡಿಸಿದರೆ, ನ್ಯಾಯಾಲಯ ಸೀಮಿತ ಹಸ್ತಕ್ಷೇಪ ಮಾಡಿ, ರಾಜ್ಯಪಾಲರು ಒಂದು ನಿಗದಿತ ಸಮಯದೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಸೂಚಿಸಬಹುದು ಎಂದು ನ್ಯಾಯಾಲಯ ಹೇಳಿದೆ.







