ಲಭ್ಯವಾಗದ ವ್ಹೀಲ್ ಚೇರ್: ವಿಮಾನದಿಂದ ಟರ್ಮಿನಲ್ ಗೆ ನಡೆಯುವ ವೇಳೆ ಕುಸಿದು ಬಿದ್ದು ವೃದ್ಧ ಮೃತ್ಯು

ಸಾಂದರ್ಭಿಕ ಚಿತ್ರ (PTI)
ಮುಂಬೈ: ವಿಮಾನದಿಂದ ಇಳಿದು ಟರ್ಮಿನಲ್ ಗೆ ಬರಲು ವ್ಹೀಲ್ ಚೇರ್ ಲಭ್ಯವಾಗದ ಹಿನ್ನೆಲೆಯಲ್ಲಿ ನಡೆದುಕೊಂಡೇ ಟರ್ಮಿನಲ್ಗೆ ಬರುತ್ತಿದ್ದ 80 ವರ್ಷ ವಯಸ್ಸಿನ ವೃದ್ಧರೊಬ್ಬರು ಇಮಿಗ್ರೇಷನ್ ಕೌಂಟರ್ನಲ್ಲಿ ಕುಸಿದು ಬಿದ್ದು ಧಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ನ್ಯೂಯಾರ್ಕ್ ನಿಂದ ಏರ್ಇಂಡಿಯಾ ವಿಮಾನದಲ್ಲಿ ಇವರು ಪತ್ನಿಯ ಜತೆ ಆಗಮಿಸಿದ್ದರು. ಇಬ್ಬರೂ ವ್ಹೀಲ್ ಚೇರ್ ಕಾಯ್ದಿರಿಸಿದ್ದರು. ಆದರೆ ವ್ಹೀಲ್ ಚೇರ್ ಕೊರತೆಯಿಂದಾಗಿ ಈ ವೃದ್ಧದಂಪತಿಗೆ ಒಂದು ವ್ಹೀಲ್ ಚೇರ್ ನೆರವು ಮಾತ್ರ ಸಿಕ್ಕಿತು. ಪತ್ನಿ ವ್ಹೀಲ್ ಚೇರ್ ನಲ್ಲಿ ಕುಳಿತರೆ ಪತಿ ಆಕೆಯ ಪಕ್ಕದಲ್ಲೇ ನಡೆದುಕೊಂಡು ಹೊರಟರು ಎಂದು ತಿಳಿದು ಬಂದಿದೆ.
ಇವರು ಸುಮಾರು 1.5 ಕಿಲೋಮೀಟರ್ ದೂರ ಕ್ರಮಿಸಿ ಇಮಿಗ್ರೇಶನ್ ಕೌಂಟರ್ ತಲುಪುತ್ತಿದ್ದಂತೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ತಕ್ಷಣವೇ ಮುಂಬೈ ವಿಮಾನ ನಿಲ್ದಾಣದ ವೈದ್ಯಕೀಯ ಸೌಲಭ್ಯ ಕೇಂದ್ರಕ್ಕೆ ಅವರನ್ನು ಕರೆದೊಯ್ದು ಬಳಿಕ ನಾನಾವತಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಮೂಲಗಳು ಹೇಳಿವೆ. ಮೃತ ವ್ಯಕ್ತಿ ಭಾರತೀಯ ಮೂಲದವರಾಗಿದ್ದು, ಅಮೆರಿಕದ ಪಾಸ್ಪೋರ್ಟ್ ಹೊಂದಿದ್ದರು. ಇವರು ಮೊದಲೇ ವ್ಹೀಲ್ ಚೇರ್ ಸೌಲಭ್ಯ ಕಾಯ್ದಿರಿಸಿದ್ದರು. ನ್ಯೂಯಾರ್ಕ್ನಿಂದ ಭಾನುವಾರ ಮುಂಬೈಗೆ ಹೊರಟ ಎಐ-116 ವಿಮಾನದ ಎಕಾನಮಿ ಕ್ಲಾಸ್ನಲ್ಲಿ ಇವರು ಆಗಮಿಸಿದ್ದರು.
ವಿಮಾನದಲ್ಲಿ 32 ವ್ಹೀಲ್ ಚೇರ್ ಪ್ರಯಾಣಿಕರಿದ್ದರು. ಆದರೆ ಕೇವಲ ಸಿಬ್ಬಂದಿ ಸಹಿತವಾಗಿ ಕೇವಲ 15 ವ್ಹೀಲ್ ಚೇರ್ ಗಳು ಲಭ್ಯವಿದ್ದವು" ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ವ್ಹೀಲ್ ಚೇರ್ ಗೆ ಅತ್ಯಧಿಕ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ನಾವು ಪ್ರಯಾಣಿಕರಿಗೆ ಕಾಯುವಂತೆ ಸೂಚಿಸಿದೆವು. ಆದರೆ ಅವರು ಪತ್ನಿಯ ಜತೆ ನಡೆದುಕೊಂಡು ಹೊರಟರು ಎಂದು ಏರ್ ಇಂಡಿಯ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಇದು ದುರದೃಷ್ಟಕರ ಘಟನೆ. ಮೃತರ ಕುಟುಂಬದ ಜತೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡುವುದಾಗಿ ಅವರು ಹೇಳಿದ್ದಾರೆ.







